

ನಟಿ ಕಲ್ಯಾಣಿ ಪ್ರಿಯದರ್ಶಿನಿ ನಟಿಸಿರುವ ಮಲಯಾಳಂನ ‘ಲೋಕಾ ಚಾಪ್ಟರ್ 1: ಚಂದ್ರ’ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಎಂಬ ಕಾರಣಕ್ಕಾಗಿ ಹೆಚ್ಚು ಸುದ್ದಿಯಾಗಿತ್ತು. ಡೊಮಿನಿಕ್ ಅರುಣ್ ನಿರ್ದೇಶನದ ಈ ಸೂಪರ್ ಹೀರೋ ಚಿತ್ರ ಆಗಸ್ಟ್ 28ರಂದು ವಿಶ್ವಾದ್ಯಂತ ರಿಲೀಸ್ ಆಗಿತ್ತು. ಮೊದಲ ದಿನದಿಂದಲೇ ಕಂಟೆಂಟ್ ಮತ್ತು ಗಳಿಕೆ ವಿಚಾರದಲ್ಲಿ ಸಿನಿಮಾ ಗಮನಸೆಳೆದಿತ್ತು. ಈ ಮಧ್ಯೆ ಬೆಂಗಳೂರು ಮಹಿಳೆಯರ ಕುರಿತು ಅವಹೇಳನಕಾರಿಯಾಗಿ ನಿಂದಿಸಲಾಗಿದೆ ಎಂಬ ಕಾರಣಕ್ಕೆ ಚಿತ್ರತಂಡ ಬೆಂಗಳೂರಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಬಳಿಕ ಕ್ಷಮೆ ಕೋರಿ, ಚಿತ್ರತಂಡ ಆ ಸಂಭಾಷಣೆಯನ್ನು ತೆರವುಗೊಳಿಸಿತ್ತು. ಇದೀಗ ಸಿನಿಮಾ ದಿನದಿಂದ ದಿನಕ್ಕೆ ಮೈಲುಗಲ್ಲು ಸಾಧಿಸುತ್ತಿದೆ. ಗಳಿಕೆ ವಿಚಾರದಲ್ಲಿ ನಾಗಾಲೋಟ ಮುಂದುವರಿಸಿದ್ದು, ರಿಲೀಸ್ ಆದ 13ನೇ ದಿನಕ್ಕೆ 200 ಕೋಟಿ ರೂ. ಕ್ಲಬ್ ಸೇರಿದೆ. ಮಲಯಾಳಂ ಸ್ಟಾರ್ ಮೋಹನ್ ಲಾಲ್ ಅಭಿನಯಿಸಿರುವ ‘ಹೃದಯಪೂರ್ವಂ’ ಜತೆ ಸ್ಪರ್ಧಿಸಿ ಮಹಿಳಾ ಪ್ರಧಾನ ಚಿತ್ರವೊಂದು ಈ ದಾಖಲೆ ಮಾಡಿರುವುದು ವಿಶೇಷ. ಇನ್ನು 200 ಕೋಟಿ ರೂಪಾಯಿ ಗಳಿಕೆ ಮಾಡಿದ ಮಲಯಾಳಂನ 4ನೇ ಚಿತ್ರವಿದು. ‘ಎಲ್ 2: ಎಂಪುರಾನ್’, ‘ತುಡರುಮ್’ ಹಾಗೂ ‘ಮಂಜುಮ್ಮೆಲ್ ಬಾಯ್ಸ’ ಮೊದಲ ಮೂರು ಸ್ಥಾನದಲ್ಲಿವೆ. ಇನ್ನು ಮಾಲಿವುಡ್ ಇತಿಹಾಸದಲ್ಲಿಯೇ 200 ಕೋಟಿ ರೂ. ಗಳಿಕೆ ಮಾಡಿದ ಮೊದಲ ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಆ ಮೂಲಕ ನಟಿ ಕಲ್ಯಾಣಿ ಪ್ರಿಯದರ್ಶಿನಿ ‘ಲೋಕ’ ಪ್ರಸಿದ್ಧಿಯಾಗಿದ್ದಾರೆ. -ಏಜೆನ್ಸೀಸ್
‘ಲೋಕ ಚಾಪ್ಟರ್ 1: ಚಂದ್ರ’ ಸೂಪರ್ ಹೀರೋ ಫ್ಯಾಂಟಸಿ ಜಾನರ್ ಸಿನಿಮಾ. ಭೂತ ಹಾಗೂ ಭವಿಷ್ಯದ ಅಂಶಗಳಿಂದಾಗಿ ಗಮನಸೆಳೆಯುತ್ತದೆ. ಹಾಲಿವುಡ್ ಚಿತ್ರಗಳ ರೀತಿಯ ಮೇಕಿಂಗ್ ಇದ್ದು, ಸ್ಕ್ರಿಪ್ಟ್, ಛಾಯಾಗ್ರಹಣ ಸೇರಿ ತಾಂತ್ರಿಕವಾಗಿಯೂ ಗುಣಮಟ್ಟದಿಂದ ಕೂಡಿದೆ. ಮುಖ್ಯವಾಗಿ ದುಲ್ಕರ್ ಸಲ್ಮಾನ್, ಟೋವಿನೋ ಥಾಮಸ್, ಸೌಬಿನ್ ಸಾಹಿರ್ ಅತಿಥಿ ಪಾತ್ರಗಳು ಗಮನಸೆಳೆಯುತ್ತವೆ. ಇನ್ನು ಚಿತ್ರದಲ್ಲಿ ಕನ್ನಡ ಸಂಭಾಷಣೆಗಳಿದ್ದು, ಮಲಯಾಳಂ ಚಿತ್ರದಲ್ಲಿ ಬೆಂಗಳೂರು ನೋಡಿದ ಅನುಭವವೂ ದೊರೆಯುತ್ತದೆ. ಕಲ್ಯಾಣಿ ಪ್ರಿಯದರ್ಶಿನಿ ಪಾತ್ರ ರೋಚಕವಾಗಿದೆ. ಈ ಎಲ್ಲ ಅಂಶಗಳಿಂದ ಹೆಚ್ಚು ಪ್ರೇಕ್ಷಕರನ್ನು ಈ ಸಿನಿಮಾ ಸೆಳೆದಿತ್ತು.