

ಮುಂಬೈ: ಸಿನಿಮಾ ಮಂದಿ ಕರೊನಾ ಭಯ ಕೈಬಿಟ್ಟಿದ್ದಾರೆ. ಮುನ್ನೆಚ್ಚರಿಕೆ ವಹಿಸಿ ಮರಳಿ ಶೂಟಿಂಗ್ನತ್ತ ಮುಖ ಮಾಡುತ್ತಿದ್ದಾರೆ. ಬಾಲಿವುಡ್ನ ಅಕ್ಷಯ್ ಕುಮಾರ್ ಈಗಾಗಲೇ ನೆದರ್ಲೆಂಡ್ನಲ್ಲಿದ್ದಾರೆ. ಸ್ಯಾಂಡಲ್ವುಡ್ ಕಲಾವಿದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಹ ಮನೆಬಿಟ್ಟು ಹೊರಬರಲಿದ್ದಾರೆ. ಅಂದರೆ ಮತ್ತೆ ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ಎದುರಾಗಲಿದ್ದಾರೆ.
ಶಕುನ್ ಬಾತ್ರಾ ನಿದೇಶನದಲ್ಲಿ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಲಾಕ್ಡೌನ್ಗೂ ಮುನ್ನ ಶ್ರೀಲಂಕಾಕ್ಕೆ ತೆರಳಿ ಆ ಚಿತ್ರದ ಕೆಲ ಭಾಗದ ಚಿತ್ರೀಕರಣ ಮುಗಿಸಿಕೊಳ್ಳುವ ಪ್ಲಾನ್ ನಿರ್ದೇಶಕರದಾಗಿತ್ತು. ಇದೀಗ ಅದರಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಕರೊನಾ ಹಿನ್ನೆಲೆಯಲ್ಲಿ ವಿದೇಶಿ ಚಿತ್ರೀಕರಣ ಸರಿಯಲ್ಲ ಎಂಬ ಕಾರಣಕ್ಕೆ ಶ್ರೀಲಂಕಾ ಶೂಟಿಂಗ್ ಬೇಡ್ವೇ ಬೇಡ ಎಂದು ದೀಪಿಕಾ ಪಟ್ಟು ಹಿಡಿದಿದ್ದರಂತೆ. ಆ ಒಂದು ಕಾರಣಕ್ಕೆ ಇದೀಗ ಲೊಕೇಷನ್ ಸ್ಥಳಾಂತರಗೊಂಡಿದೆ.
ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡುವ ಸಲುವಾಗಿ ಕಳೆದ ತಿಂಗಳೇ ಅಲ್ಲಿ ಹಾಕಲಾಗಿದ್ದ ಒಂದಷ್ಟು ಸೆಟ್ಗಳಿಗೆ ಭೇಟಿ ಕೊಟ್ಟು ಬಂದಿದ್ದರು ಶಕುನ್. ಇದೀಗ ಶ್ರೀಲಂಕಾ ಕೈಬಿಟ್ಟು ಅನಿವಾರ್ಯವಾಗಿ ಗೋವಾ ಆಯ್ದುಕೊಂಡು, ಸ್ಕ್ರಿಪ್ಟ್ ಬದಲಾವಣೆ ಮಾಡುತ್ತಿದ್ದಾರೆ. ಸಿದ್ಧಾಂತ್ ಚತುರ್ವೆದಿ, ಅನನ್ಯಾ ಪಾಂಡೆ ಸಹ ಈ ಚಿತ್ರದಲ್ಲಿದ್ದು, ಸೆ. 15ಕ್ಕೆ ಶೂಟಿಂಗ್ ಶುರುವಾಗಲಿದೆ. -ಏಜೆನ್ಸೀಸ್