ರಾಜಕಾರಣಕ್ಕೂ ಸಿನಿಮಾ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ರಾಜಕೀಯ ಕಾರ್ಯಕ್ರಮಗಳು, ಚುನಾವಣೆ ವೇಳೆ ರಾಜಕಾರಣಿಗಳು ಸಿನಿಮಾ ತಾರೆಯರನ್ನು ಕರೆಸುವುದು, ಸಿನಿಮಾ ಮುಹೂರ್ತ, ಟ್ರೇಲರ್, ಆಡಿಯೋ ಬಿಡುಗಡೆಗಳಿಗೆ ರಾಜಕಾರಣಿಗಳನ್ನು ಕರೆಸುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ರಾಜಕಾರಣಿಗಳ ಕುಟುಂಬದಲ್ಲೇ ಸಿನಿಮಾ ತಾರೆಯರು ಸೃಷ್ಟಿಯಾದ ಉದಾಹರಣೆಗಳೂ ಇವೆ. ಇದೀಗ ಈ ಸಾಲಿಗೆ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರ ಧ್ಯಾನ್ ಯೋಗೇಶ್ವರ್ ಹೊಸ ಸೇರ್ಪಡೆ. ರಾಜಕಾರಣದಲ್ಲಿ ಸಕ್ರಿಯರಾಗುವ ಮುನ್ನ ಸಿಪಿವೈ "ಸೈನಿಕ', "ಶಿವಪ್ಪ ನಾಯಕ', "ಬದ್ರಿ' ಸೇರಿ ಏಳೆಂಟು ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಅವರ ಪುತ್ರ ಧ್ಯಾನ್ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದು, "ಸೈನಿಕ 2' ಮತ್ತೊಂದು "ಕರ್ಣಾಟಬಲಂ' ಇಂದು ಸೆಟ್ಟೇರಲಿವೆ. "ಸೈನಿಕ' ಸೀಕ್ವೆಲ್ನಲ್ಲಿ ಧ್ಯಾನ್ ಜತೆ ಯೋಗೇಶ್ವರ್ ಕೂಡ ನಟಿಸುತ್ತಿದ್ದು "ಉಗ್ರಾಯುಧಂ' ಖ್ಯಾತಿಯ ಪುನೀತ್ ರುದ್ರನಾಗ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಇನ್ನು "ಕರ್ಣಾಟಬಲಂ' ಐತಿಹಾಸಿಕ ಮತ್ತು ಸಾಮಾಜಿಕ ಎರಡು ಟ್ಟಗಳಲ್ಲಿ ಸಾಗುವ ಕಥೆಯಾಗಿದ್ದು, ಎರಡು ಲುಕ್ಗಳಲ್ಲಿ ಧ್ಯಾನ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಚಿತ್ರರಂಗಕ್ಕೆ ಬರಲೆಂದೇ ಧ್ಯಾನ್ ನಟನಾ ತರಬೇತಿಯ ಜತೆ ಡಾನ್ಸ್, ಕುದುರೆ ಸವಾಲಿ, ಸಮರ ಕಲೆ ಕಲಿತಿದ್ದು, ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡು ಭರ್ಜರಿಯಾಗೇ ತಯಾರಿ ಮಾಡಿಕೊಂಡಿದ್ದಾರೆ.