

ಬೆಂಗಳೂರು: ಈ ಹಿಂದೆ 'ಬ್ಲೂ ಐಸ್', 'ರೆಡ್' ಮುಂತಾದ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ರಾಜೇಶ್ ಮೂರ್ತಿ, ಒಂದು ದೊಡ್ಡ ಗ್ಯಾಪ್ನ ನಂತರ ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು 'ಲಿಪ್ಸ್ಟಿಕ್ ಮರ್ಡರ್' ಎಂಬ ಇನ್ನೊಂದು ಥ್ರಿಲ್ಲರ್ ಚಿತ್ರವನ್ನು ನಿರ್ದೇಶನ ಮಾಡಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಆನ್ಲೈನ್ ಡೇಟಿಂಗ್ ಆಪ್ಗಳು ಮೂಲಕ ಯುವಕರು ಯಾವರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇಂದು ಡೇಟಿಂಗ್ ಆಪ್ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್ ಆಗುವ ಕಥೆ ಈ ಚಿತ್ರದ್ದು. ಈ ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯಲು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಕಥೆಯಲ್ಲಿ ಎಂಟ್ರಿ ಕೊಡುತ್ತಾನೆ. ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ? ಎಂಬ ಕಥೆ ಈ ಚಿತ್ರದಲ್ಲಿದೆ.
ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ 'ಹರಹರ ಮಹಾದೇವ, ಉಘೇ ಉಘೇ ಮಾದೇಶ್ವರ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಆರ್ಯನ್ ರಾಜ್, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿತೆ ರಾಜೇಶ್ ಮಿಶ್ರಾ ಈ ಚಿತ್ರದಲ್ಲಿದ್ದಾರೆ.
'ಲಿಪ್ಸ್ಟಿಕ್ ಮರ್ಡರ್' ಚಿತ್ರಕ್ಕೆ ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ ಮತ್ತು ಆರ್.ವಿನೋದ್ ಅವರ ಛಾಯಾಗ್ರಹಣವಿದೆ.