‘ವೃತ್ತ’ದೊಳಗೆ ಲಿಖಿತ್ : ಕಾಲೇಜಿನಲ್ಲಿ ಕಾಡಿದ ಕಥೆಯನ್ನು ಚಿತ್ರವಾಗಿಸಿದ ನಿರ್ದೇಶಕ

vruttha 1
Published on

ಬೆಂಗಳೂರು: ಎಂದೋ ಕಣ್ಣಾರೆ ನೋಡಿದ ಕೆಲ ಘಟನೆ, ದೃಶ್ಯಗಳು ಮನುಷ್ಯನನ್ನು ಕಾಡುತ್ತವೆ. ಕಾಡಿದ ಘಟನೆಗಳನ್ನು ಕಥೆಯಾಗಿಸಬಹುದು, ಆದರೆ ಸಿನಿಮಾ ಮಾಡುವುದು ಸವಾಲಿನ ಕೆಲಸ. 2017ರಲ್ಲಿ ಕಾಲೇಜು ದಿನಗಳಲ್ಲಿ ಕಾಡಿದ ಕಥೆಯನ್ನು ‘ವೃತ್ತ’ದ ಮೂಲಕ ಚಿತ್ರವಾಗಿಸಿದ್ದಾರೆ ನಿರ್ದೇಶಕ ಲಿಖಿತ್. ಇದು ಅವರ ಮೊದಲ ಪ್ರಯತ್ನ. ಈ ಮಿಸ್ಟರಿ- ಥ್ರಿಲ್ಲರ್ ಜಾನರ್ ಕಥೆಯಲ್ಲಿ ರಂಗಭೂಮಿ ಹಿನ್ನೆಲೆಯ ಮಾಹಿರ್ ಮೊಹಿಯುದ್ದೀನ್, ಚೈತ್ರಾ ಜೆ. ಆಚಾರ್, ಹರಿಣಿ ಸುಂದರ್‌ರಾಜನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಶುಕ್ರವಾರ ಸಿನಿಮಾ ರಿಲೀಸ್ ಆಗುತ್ತಿದ್ದು, ನಿರ್ದೇಶಕ ಲಿಖಿತ್, ‘ಇದು ಕಾಡಿನ ಕಥೆ ಹಾಗೆಯೇ ನನ್ನನ್ನು ತುಂಬ ಕಾಡಿದ ಕಥೆ. ಕಾಲೇಜು ದಿನಗಳಲ್ಲಿಯೇ ನನಗೆ ಈ ಕಥೆ ಹೊಳೆದಿತ್ತು. ಆದರೆ, ಚಿತ್ರಕಥೆ ಮಾಡುವುದು ಹೇಗೆ ಎನ್ನುವಾಗ ಯೋಗೀಶ್ ಗೌಡ ನೆರವಾದರು. ಹೀಗೆ ‘ವೃತ್ತ’ ಜರ್ನಿ ಆರಂಭವಾಯಿತು. ಇದೊಂದು ವಿಭಿನ್ನ ಪ್ರಯತ್ನ. ಹೊಸ ಶೈಲಿಯ ಪ್ರಯೋಗಾತ್ಮಕ ಸಿನಿಮಾ. ಬಹುತೇಕ ಹೊಸಬರ ಚಿತ್ರ. ನಮ್ಮನ್ನು ನಾವು ಚಿತ್ರರಂಗದಲ್ಲಿ ಸಾಬೀತುಪಡಿಸಿಕೊಳ್ಳಲು ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಲೈವ್ ಲೋಕೇಷನ್‌ಗಳಲ್ಲಿ ರನ್ನಿಂಗ್ ಕ್ಯಾಮರಾ ಬಳಸಿದ್ದೇವೆ. ಬಹುತೇಕ ಕಥೆ ಪಶ್ವಿಮ ಘಟ್ಟದ ಕಾಡಿನಲ್ಲಿ ನಡೆಯುವುದರಿಂದ ಪ್ರತಿ ಹೆಜ್ಜೆಗೂ ಕಾತುರ ಇರುವಂತೆ ನೋಡಿಕೊಂಡಿದ್ದೇವೆ. ಚಿತ್ರವನ್ನು ಅತ್ಯಾಧುನಿಕವಾಗಿ ತರಲು ಹಂಗೇರಿಯಲ್ಲಿ ಲೈವ್ ಸ್ಕೋರ್ ಮಾಡಿಸಿದ್ದೇವೆ. ಸಿನಿಮಾ ಎರಡು ತಾಸು ಪ್ರೇಕ್ಷಕನನ್ನು ಖಂಡಿತ ಹಿಡಿದಿಟ್ಟುಕೊಳ್ಳುತ್ತದೆ ಎಂಬ ಭರವಸೆಯಿದೆ. ಸಿದ್ಧಾರ್ಥ ಎಂಬ ಒಂದೇ ಪಾತ್ರದ ಸುತ್ತ ಕಥೆ ಆವರಿಸಿಕೊಳ್ಳುತ್ತದೆ. ಆ ಪಾತ್ರದ ನೆರಳಿನಲ್ಲಿ ಹಲವು ಪಾತ್ರಗಳನ್ನು ಸೃಷ್ಟಿಸಲಾಗಿದೆ. ಈ ಚಿತ್ರದ ಸ್ಟ್ ಕಾಪಿಯನ್ನು ನೋಡಿದ ನಟ ಸತೀಶ್ ನೀನಾಸಂ ‘ದ ಬೆಸ್ಟ್ ಸಿನಿಮಾ’ ಎಂದು ಉದ್ಗರಿಸಿದರು. ಜತೆಗೆ ತಮ್ಮದೇ ಬ್ಯಾನರ್ ಮೂಲಕ ಅರ್ಪಿಸೋಣ ಎಂದರು. ನಮ್ಮಂಥ ಹೊಸಬರಿಗೆ ಅವರು ಬೆಂಬಲವಾಗಿ ನಿಂತಿರುವುದರಿಂದ ನಮಗೆ ಮತ್ತಷ್ಟು ಧೈರ್ಯಬಂದಿದೆ’ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net