ಚಿತ್ರೀಕರಣ ವೇಳೆ ಲೈಟ್​ಮ್ಯಾನ್‌ ಸಾವು; ನಿರ್ದೇಶಕ ಯೋಗರಾಜ್‌ ಭಟ್‌ ವಿರುದ್ಧ ಪ್ರಕರಣ ದಾಖಲು

yoga
Published on

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್‌ ಭಟ್‌ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ 'ಮನದ ಕಡಲು' ಸಿನಿಮಾ ಶೂಟಿಂಗ್ ವೇಳೆ 30 ಅಡಿ ಮೇಲಿಂದ ಲೈಟ್‌ ಮ್ಯಾನ್‌ ಮೋಹನ್‌ ಕುಮಾರ್ ಎಂಬುವವರು ಬಿದ್ದು ನಿಧನರಾಗಿದ್ದಾರೆ. ಈ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಸೇರಿ ಚಿತ್ರತಂಡದ ಕೆಲವರ ಮೇಲೆ ಎಫ್​ಐಆರ್​ ದಾಖಲಾಗಿದೆ.

ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ಗೋಡೌನ್​ವೊಂದರಲ್ಲಿ 'ಮನದ ಕಡಲು' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸೆ.3ರಂದು ಸಂಜೆ 5 ಗಂಟೆ ವೇಳೆ  30 ಅಡಿ ಎತ್ತರದ ಅಲ್ಯುಮಿನಿಯಮ್ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ ಮೋಹನ್ ಕುಮಾರ್​​ ಅಲ್ಲಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಮೋಹನ್ ಕುಮಾರ್ ಮೇಲಿಂದ ಕೆಳಕ್ಕೆ ಬಿದ್ದಾಗ ತಲೆಗೆ ಏಟಾಗಿ ತೀವ್ರ ರಕ್ತಸ್ರಾವ ಆಯಿತು. ಬಳಿಕ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೇ ಮೋಹನ್‌ಕುಮಾರ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net