

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜಕುಮಾರ್ ಇಲ್ಲವಾಗಿ ಇಂದಿಗೆ ಏಳು ದಿನವಾಯಿತು. ಮನೆಯಲ್ಲಿ ಕುಟುಂಬದವರ ಶೋಕ ಮಡುಗಟ್ಟಿದರೆ, ಅಭಿಮಾನಿವಲಯದಲ್ಲಿ ನೆಚ್ಚಿನ ನಟನನ್ನು ಕಳೆದುಕೊಂಡ ಸಂಕಟ. ಈ ನೋವಿನಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿನ ಅಭಿಮಾನಿ ಬಳಗಗಳು ದೃಢ ನಿರ್ಧಾರವೊಂದಕ್ಕೆ ಬಂದಿವೆ. ಇನ್ನಾದರೂ ಫ್ಯಾನ್ ವಾರ್ ಬದಿಗಿಟ್ಟು ಬದಲಾಗೋಣ ಬನ್ನಿ ಎಂದು ಕರೆಕೊಟ್ಟಿವೆ. ‘ಯುನೈಟೆಡ್ಕೆಎಫ್ಐ’ ಹ್ಯಾಷ್ಟ್ಯಾಗ್ ಅಡಿಯಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಪ್ರತಿಯೊಬ್ಬ ನಟನಿಗೂ ಅವರದೇ ಆದ ಅಭಿಮಾನಿ ಬಳಗವಿದೆ. ಕೋಟ್ಯಂತರ ಹಿಂಬಾಲಕರಿದ್ದಾರೆ. ಆ ನಟನ ಪ್ರತಿ ಪೋಸ್ಟ್, ಅವರ ಬಗೆಗಿನ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸುವವರಿದ್ದಾರೆ. ಇದೆಲ್ಲದ ನಡುವೆ ಬೇರೊಬ್ಬ ನಟನ ಕಾಲೆಳೆಯುವುದು, ಟ್ರೋಲ್ ಮಾಡುವುದೂ ಇಲ್ಲಿ ಸರ್ವೆ ಸಾಮಾನ್ಯ. ಇದೀಗ ಅದ್ಯಾವುದೂ ಬೇಡ, ಚಿತ್ರರಂಗಕ್ಕಾಗಿ ಒಂದಾಗೋಣ, ಎಲ್ಲ ನಟರನ್ನು ಒಂದೇ ರೀತಿಯಲ್ಲಿ ನೋಡೋಣ ಎಂದು ಸುದೀಪ್ ಅಭಿಮಾನಿಗಳು ಬಹಿರಂಗವಾಗಿ ಪತ್ರದ ಮೂಲಕ ಕರೆನೀಡಿದ್ದು, ಬಹುತೇಕರು ಇದನ್ನು ಸ್ವಾಗತಿಸಿದ್ದಾರೆ. ನಟ ಜಗ್ಗೇಶ್ ಸಹ ಈ ಬೆಳವಣಿಗೆಯನ್ನು ಮೆಚ್ಚಿದ್ದಾರೆ.