LAUGHING BUDDHA FILM REVIEW: ‘ಹೊಟ್ಟೆ’ ಹುಣ್ಣಾಗಿಸುವ ‘ಲಾಫಿಂಗ್ ಬುದ್ಧ’

budda 1
Published on

ಶಿವ ಸ್ಥಾವರಮಠ

ಚಿತ್ರ: ಲಾಫಿಂಗ್ ಬುದ್ಧ
ನಿರ್ದೇಶಕ: ಭರತ್ ರಾಜ್
ನಿರ್ಮಾಣ: ರಿಷಬ್ ಶೆಟ್ಟಿ
ತಾರಾಗಣ: ಪ್ರಮೋದ್ ಶೆಟ್ಟಿ, ದಿಗಂತ್, ತೇಜು ಬೆಳವಾಡಿ, ಸುಂದರ್ ಮತ್ತಿತರರು

‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬುದು ದಾಸರ ನುಡಿ. ಇದಕ್ಕಾಗಿ ನಾವು ಏನೆಲ್ಲ ಮಾಡುತ್ತೇವೆ. ಆದರೆ, ಕೊನೆಗೆ ಹೊಟ್ಟೆಯೇ ಸಮಸ್ಯೆಯಾದರೆ ಹೇಗೆ ಎಂಬುದು ಒಂದು ಹೊಟ್ಟೆಯ ಕಥೆಯನ್ನು ‘ಲಾಫಿಂಗ್ ಬುದ್ಧ’ದಲ್ಲಿ ತಿಳಿಹಾಸ್ಯದ ಮೂಲಕ ನಿರೂಪಿಸಿದ್ದಾರೆ ನಿರ್ದೇಶಕ ಭರತ್ ರಾಜ್.

ಇದು ಗೋವರ್ಧನನೆಂಬ ಪೊಲೀಸ್ ಕಾನ್‌ಸ್ಟೇಬಲ್‌ನ ಕಥೆ. ಆತನೇ ಹೀರೋ, ಆತನ ಹೊಟ್ಟೆಯೇ ವಿಲನ್. ಗೋವರ್ಧನ ತಿಂಡಿಪೋತ. ಸ್ಟೇಷನ್‌ನಲ್ಲಿ ಯಾರೇ ರುಚಿಯಾದ ತಿಂಡಿ ತಂದರೂ ಅದರ ಮೊದಲ ಪ್ರಸಾದ ಆತನ ಹೊಟ್ಟೆಗೆ. ಹಾಗಂತ ಬರೀ ತಿನ್ನುತ್ತ ಕೂರುವಾತ ಅಲ್ಲ. ಠಾಣೆಯಲ್ಲಿ ಕೈದಿಗಳ ಬಾಯಿಬಿಡಿಸುವ ಉಸ್ತುವಾರಿ ಈತನದ್ದೆ. ಹೀಗಿರುವಾಗ, ಸ್ಟೇಷನ್‌ನಲ್ಲಿ ಒಂದು ಬಾರಿ ಕುಟುಂಬದ ಸಹಭೋಜನ ಆಯೋಜಿಸಲಾಗುತ್ತದೆ. ಅದರಲ್ಲಿ ಎಸ್ಪಿ (ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್) ಸೇರಿ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರೆಲ್ಲೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಈ ಸಂತೋಷವನ್ನು ಎಸ್ಪಿ ಹಂಚಿಕೊಳ್ಳುವಾಗ ಮಾಧ್ಯಮಗಳು ಕೇಳಿದ ಒಂದು ಪ್ರಶ್ನೆಯು ಗೋವರ್ಧನ ಸೇರಿ ಉಳಿದ ಎಲ್ಲ ಸಿಬ್ಬಂದಿಯ ಪೀಕಲಾಟಕ್ಕೆ ಕಾರಣವಾಗುತ್ತದೆ. ಇದರಿಂದ ಮುಂದೆ ಗೋವರ್ಧನ ಹಲವು ರೀತಿಯ ಚಾಲೆಂಜ್ ಎದುರಿಸುವಂತಾಗುತ್ತದೆ. ಅಷ್ಟಕ್ಕೂ ಮಾಧ್ಯಮದವರು ಕೇಳಿದ ಪ್ರಶ್ನೆ ಏನು? ಮುಂದೆ ಗೋವರ್ಧನ ಎದುರಿಸುವ ಸವಾಲುಗಳೇನು ಎಂಬುದು ತಿಳಿಯಬೇಕಾದರೆ ನೀವು ‘ಥಿಯೇಟರ್ ಚಲೋ’ ಮಾಡಬೇಕಷ್ಟೇ.

ಪೊಲೀಸ್ ಕಥೆ ಎಂದರೆ ರಕ್ತ, ಕೊಲೆ, ಕೇಸುಗಳ ಹಿಂದೆ ಓಡಾಟ ಇದ್ದೇ ಇರುತ್ತದೆ. ಇಲ್ಲಿ ಹಾಗಲ್ಲ, ನಿರ್ದೇಶಕ ಭರತ್ ಒಬ್ಬ ಪೊಲೀಸ್ ಅಧಿಕಾರಿಯ ಬದುಕು, ಒತ್ತಡ ಮತ್ತು ಚಾಲೆಂಜ್‌ಗಳನ್ನು ಸರಳವಾಗಿ ನಗಿಸುತ್ತಲೇ ಹೇಳಿದ್ದಾರೆ. ಎಲ್ಲಿಯೂ ಬೋರ್ ಎನಿಸಲ್ಲ. ಮೊದಲಿನಿಂದ ಕೊನೆಯವರೆಗೆ ಎಲ್ಲಿಯೂ ಕಥೆ ಬಿಟ್ಟುಕೊಡದೆ ಕುತೂಹಲ ಉಳಿಸಿಕೊಂಡಿದ್ದಾರೆ. ಪಾತ್ರಗಳನ್ನು ಕೂಡ ಅಚ್ಚುಕಟ್ಟಾಗಿ ಅವರ ಮ್ಯಾನರಿಸಂಗೆ ತಕ್ಕಂತೆ ನಿರೂಪಿಸಿದ್ದಾರೆ. ಹೀಗಾಗಿ ಕಥೆ ಆಪ್ತ ಎನಿಸುತ್ತದೆ.

ಪ್ರಮೋದ್ ಶೆಟ್ಟಿ ಈ ಪಾತ್ರಕ್ಕೆ ಹೇಳಿಮಾಡಿಸಿದಂತೆ ಒಪ್ಪಿದ್ದು, ಪಾತ್ರದಲ್ಲಿ ಜೀವಿಸಿದ್ದಾರೆ. ಹಾಸ್ಯ, ಭಾವನಾತ್ಮಕ ದೃಶ್ಯಗಳಿಗೆ ತಕ್ಕಂತೆ ನಟಿಸಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ. ತೇಜು ಬೆಳವಾಡಿ ಅಭಿನಯ ಮನೋಜ್ಞವಾಗಿದೆ. ಹಿರಿಯ ನಟ ಸುಂದರ್ ರಾಜ್, ಪೊಲೀಸ್ ಅಧಿಕಾರಿಗಳ ಪಾತ್ರಧಾರಿಗಳು ಗಮನಸೆಳೆಯುತ್ತಾರೆ. ಇನ್ನು ತಾಂತ್ರಿಕವಾಗಿ ಸಿನಿಮಾ ಸಶಕ್ತವಾಗಿ ಮೂಡಿಬಂದಿದೆ. ಚಂದ್ರಶೇಖರನ್ ಛಾಯಾಗ್ರಹಣ ಪೊಲೀಸ್ ಸ್ಟೇಶನ್ ವಾತಾವರಣ ನಿರ್ಮಿಸಿದ್ದು, ವಿಜಯ್ ವಿಷ್ಣು ಸಂಗೀತ ಚೆನ್ನಾಗಿ ಮೂಡಿಬಂದಿದೆ. ಕೆ.ಕಲ್ಯಾಣ ರಚನೆಯ ‘ಎಂಥಾ ಚೆಂದನೇ’ ಗೀತೆ ಮಧುರವಾಗಿದೆ. ಚಿತ್ರದ ಸಂಭಾಷಣೆ ಆಪ್ತ ಎನಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net