ದುನಿಯಾ ವಿಜಯ್, ರಚಿತಾ ರಾಮ್ ಅಭಿನಯದ "ಲ್ಯಾಂಡ್‌ಲಾರ್ಡ್’ ಚಿತ್ರ ಜ.23ಕ್ಕೆ ರಿಲೀಸ್

landlord
Published on

ಬೆಂಗಳೂರು : ‘ದುನಿಯಾ’ ವಿಜಯ್ ಹಾಗೂ ‘ಕಾಟೇರ’ ಬರಹಗಾರ ಜಡೇಶ್ ಕೆ. ಹಂಪಿ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ‘ಲ್ಯಾಂಡ್‌ಲಾರ್ಡ್’. 80ರ ದಶಕದ ಕಥೆಯಾಗಿದ್ದು, ‘ಇದು ಆಳಿದವರ ಕಥೆಯಲ್ಲ, ಅಳಿದು, ಉಳಿದವರ ಕಥೆ’ ಎಂಬ ಅಡಿಬರಹ ಚಿತ್ರಕ್ಕಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಆರಂಭಿಸಿದೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸರ್ವೈವರ್ ಹೆಸರಿನಲ್ಲಿ ಟೀಸರ್ ರಿಲೀಸ್ ಮಾಡಿದೆ. 1.47 ನಿಮಿಷದ ಈ ಟೀಸರ್‌ನ್ನು ನಟಿ ಉಮಾಶ್ರೀ ಹಿನ್ನೆಲೆಯ ಧ್ವನಿಯಲ್ಲಿ, ‘ಪುರಾಣದ ರಾಮಕೃಷ್ಣರ ದೇವರಾದರು. ಪಂಚತಂತ್ರದ ಹುಲಿ-ಸಿಂಹಗಳು ದಂತಕಥೆಗಳಾದವು, ಇತಿಹಾಸದ ರಾಜರು ನೆನಪಿನಲ್ಲಿ ಉಳಿದರು. ಆಳಿದವರ ಎದುರು, ಅಳಿಯದೆ ಉಳಿದವನೊಬ್ಬ ಮಾರಿಯಾದನು. ತಲೆ ಎತ್ತಿ ಚರಿತ್ರೆಯಾದನು’ ಎಂದು ನಿರೂಪಿಸಲಾಗಿದೆ. ಕೊನೆಗೆ ನಟ ವಿಜಯ್ ಕೊಡಲಿ ಹಿಡಿದು ಅಬ್ಬರಿಸಿರುವುದು ಟೀಸರ್‌ನ ಹೈಲೈಟ್. ಇದೇ ಸಂದರ್ಭದಲ್ಲಿ ತಂಡವು ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, 2026ರ ಜನವರಿ 23ರಂದು ಸಿನಿಮಾ ತೆರೆ ಮೇಲೆ ಬರಲಿದೆ. ಇಲ್ಲಿ ದುನಿಯಾ ವಿಜಯ್ ಜತೆಗೆ ಪುತ್ರಿ ರಿತನ್ಯಾ, ನಟಿ ರಚಿತಾ ರಾಮ್, ಅವಿನಾಶ್, ಶಿಶಿರ್ ಬೈಕಾಡಿ, ರಾಕೇಶ್ ಅಡಿಗ ಕಲಾ ಬಳಗದಲ್ಲಿದ್ದಾರೆ. ದುನಿಯಾ ವಿಜಯ್, ‘ನಾನು ಹಾಗೂ ರಚಿತರಾಮ್ ಒಂದೇ ಬಡಾವಣೆಯವರು. ಮೊದಲಿನಿಂದಲೂ ಸ್ನೇಹಿತರು. ಜತೆಗೆ ಅಭಿನಯಿಸಿದ್ದು ಹಾಗೂ ತೆರೆಯ ಮೇಲೆ ಅಷ್ಟೇ ಅಲ್ಲ. ನಿಜಜೀವನದಲ್ಲೂ ನನ್ನನ್ನು ತಾಯಿಯ ತರಹ ಪ್ರೀತಿ ಮಾಡುವ ಹಿರಿಯ ನಟಿ ಉಮಾಶ್ರೀ ಅವರ ಜತೆ ನಟಿಸಿದ್ದು ಬಹಳ ಸಂತೋಷವಾಗಿದೆ. ನನ್ನ ಮಗಳು ರಿತನ್ಯ ಕೂಡ ಅಭಿನಯಿಸಿದ್ದು, ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ’ ಎಂದು ಖುಷಿ ಹಂಚಿಕೊಂಡರು.

ಕಥೆ ಕೇಳಿ ಥ್ರಿಲ್ ಆಗಿದ್ದೆ: ನಟಿ ರಚಿತಾರಾಮ್, ‘ಈ ಚಿತ್ರದ ಕಥೆ ಕೇಳುವಾಗಲೇ ಬಹಳ ಕುತೂಹಲ ಎನಿಸಿತ್ತು. ಕಥೆ ಕೇಳುತ್ತಿರುವಾಗಲೇ ಈ ಪಾತ್ರ ನಾನೇ ಮಾಡಬೇಕು ಅಂದುಕೊಂಡೆ. ಕಥೆ ಕೇಳಿದ ಮೇಲೆ ನಾನು ದರ್ಶನ್ ಸರ್ ಹಾಗೂ ಲೋಕೇಶ್ ಕನಗರಾಜುಗೆ ಚಿತ್ರದ ಬಗ್ಗೆ ಹೇಳಿದೆ. ಅವರು ಕೂಡ ಕಥೆ ಚೆನ್ನಾಗಿದೆ ಎಂದರು. ತುಂಬಾ ವರ್ಷಗಳ ನಂತರ ವಿಜಯ್ ಜತೆಗೆ ನಟಿಸಿದ್ದೇನೆ. ನಿಂಗವ್ವ ನನ್ನ ಪಾತ್ರದ ಹೆಸರು’ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net