

ಎರಡು ವರ್ಷಗಳಾಯ್ತು ಅಮೀರ್ ಖಾನ್ ಚಿತ್ರವೊಂದು ಬಿಡುಗಡೆಯಾಗಿ. 2018ರ ಡಿಸೆಂಬರ್ನಲ್ಲಿ ಬಿಡುಗಡೆಯಾದ 'ಥಗ್ಸ್ ಆಫ್ ಹಿಂದೂಸ್ಥಾನ್' ಚಿತ್ರವೇ ಕೊನೆ. ಆ ನಂತರ ಅಮೀರ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ.
ಅಮೀರ್ ಅಭಿನಯದ 'ಲಾಲ್ ಸಿಂಗ್ ಛಡ್ಡಾ' ಎಂಬ ಚಿತ್ರ ಸೆಟ್ಟೇರಿದ್ದು ಗೊತ್ತಿರಬಹುದು. ಹಾಲಿವುಡ್ ಚಿತ್ರ 'ಫಾರೆಸ್ಟ್ ಗಂಪ್'ನಿಂದ ಸ್ಫೂರ್ತಿ ಪಡೆದ ಈ ಚಿತ್ರದ ಚಿತ್ರೀಕರಣ ಸಹ ಶುರುವಾಗಿತ್ತು. ಆದರೆ, ಲಾಕ್ಡೌನ್ನಿಂದ ಅರ್ಧದಲ್ಲೇ ನಿಂತಿತ್ತು. ಇಷ್ಟರಲ್ಲಿ ಚಿತ್ರೀಕರಣ ಮುಗಿಸಿ, ಡಿಸೆಂಬರ್ನಲ್ಲಿ ಚಿತ್ರ ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆಯಾಗಿತ್ತು. ಈಗ ಲಾಕ್ಡೌನ್ನಿಂದ ಚಿತ್ರತಂಡದ ಯೋಚನೆ ತಲೆ ಕೆಳಗಾಗಿದೆ.
ಈ ಮಧ್ಯೆ, ಚಿತ್ರವನ್ನು ಲಡಾಖ್ನಲ್ಲಿ ಚಿತ್ರೀಕರಿಸಬೇಕು ಎಂಬುದು ಅಮೀರ್ ಖಾನ್ ಆಸೆಯಾಗಿತ್ತು. ಲಾಕ್ಡೌನ್ ಮುಗಿದ ಮೇಲೆ ಲಡಾಖ್ನಲ್ಲಿ ಒಂದಿಷ್ಟು ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಈ ಮುನ್ನ ಸಿದ್ಧತೆ ನಡೆಸಿತ್ತು. ಈ ನಡುವೆ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾಗಿದ್ದರಿಂದ, ಲಡಾಖ್ ಬಿಟ್ಟು ಕಾರ್ಗಿಲ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ.
ಈಗಾಗಲೇ ಚಿತ್ರತಂಡದವರು ದೆಹಲಿ, ರಾಜಸ್ತಾನ, ಚಂಡೀಗಢ, ಅಮೃತಸರ, ಕೊಲ್ಕತ್ತಾ ಮುಂತಾದ ಕಡೆ ಚಿತ್ರೀಕರಣ ಮಾಡಿತ್ತು. ಲಡಾಖ್ನಲ್ಲಿ ಚಿತ್ರೀಕರಣ ಮಾಡಿಸುವುದಕ್ಕೆ ಯೋಚಿಸಿತ್ತು. ಈಗ ಬಹುಶಃ ಮುಂದಿನ ಹಂತದ ಚಿತ್ರೀಕರಣ ಕಾರ್ಗಿಲ್ನಲ್ಲಿ ಆಗುವ ಸಾಧ್ಯತೆ ಇದೆ. ಹಾಗಂತ ಈಗಲೇ ಶುರುವಾಗುವುದಿಲ್ಲ. ಅಕ್ಟೋಬರ್ವರೆಗೂ ಚಿತ್ರೀಕರಣದಲ್ಲಿ ಭಾಗವಹಿಸದಿರಲು ಅಮೀತ್ ಖಾನ್ ನಿರ್ಧರಿಸಿದ್ದಾರೆ.
ಅಷ್ಟರಲ್ಲಿ ಕರೊನಾ ತಹಬದಿಗೆ ಬಂದರೆ, ಚಿತ್ರೀಕರಣ ಮುಂದುವರೆಯಲಿದೆ. ಇಲ್ಲವಾದರೆ, ಇನ್ನೂ ಪೋಸ್ಟ್ಪೋನ್ ಆದರೆ, ಆಶ್ಚರ್ಯವಿಲ್ಲ.
'ಲಾಲ್ ಸಿಂಗ್ ಛಡ್ಡಾ' ಚಿತ್ರದಲ್ಲಿ ಅಮೀರ್ ಖಾನ್ ಜತೆಗೆ ಕರೀನಾ ಕಪೂರ್, ವಿಜಯ್ ಸೇತುಪತಿ ಮುಂತಾದವರು ನಟಿಸಿದ್ದು, ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ.