

ಚಿತ್ರ: ಲಕ್ಷ್ಯ
ನಿರ್ದೇಶನ: ಅರ್ಜುನ್ ಪಿ.ಡೋಣೂರ
ತಾರಾಗಣ: ನಿಧಿ ಚಕ್ರವರ್ತಿ, ಸಂಗಮೇಶ್ ಉಪಾಸೆ, ತೇಜಸ್ ಪೂಜಾರ್, ಹಿತೇಶ್ ಹಿರೇಮಠ ಮತ್ತಿತರರು
ಶಿವ ಸ್ಥಾವರಮಠ
ಪ್ರಾದೇಶಿಕ ಭಾಷೆ ಸೊಗಡಿನ ಮಕ್ಕಳ ಸಿನಿಮಾಗಳಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಪರಂಪರೆಯೇ ಇದೆ. ಕಳೆದ ವರ್ಷ ಇಸ್ಲಾಹುದ್ದೀನ್ ನಿರ್ದೇಶನದಲ್ಲಿ ‘ಅನ್ನ’ ಚಿತ್ರ ಗಮನಸೆಳೆದಿತ್ತು. ಹಾಗೆಯೇ ಇದೀಗ ತೆರೆಕಂಡಿರುವ ‘ಲಕ್ಷ್ಯ’ ಚಿತ್ರವು ಇದೇ ಹಾದಿಯಲ್ಲಿ ಸಾಗುತ್ತದೆ. ನಾಲ್ವರು ಬಾಲಕರು ಕನಸಿನ ಬೆನ್ನೇರಿ ಸಾಗುವ ಕಥೆಯನ್ನು ನಿರ್ದೇಶಕ ಅರ್ಜುನ್ ಪಿ.ಡೋಣೂರ ಬಹು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸೊಗಡು, ಸಂಸ್ಕೃತಿ ಹಾಗೂ ಜನ-ಜೀವನವನ್ನು ಚಿತ್ರದಲ್ಲಿ ಸೊಗಸಾಗಿ ನಿರೂಪಿಸಲಾಗಿದೆ.
ವಿಜಯಪುರ ಜಿಲ್ಲೆಯ ಒಂದು ಹಳ್ಳಿ ಕಲಾದಗಿ. ಆ ಊರಿನ ನಾಲ್ವರು ಬಾಲಕರು ಎರಡು ಕಿಮೀ ದೂರವಿರುವ ಇನ್ನೊಂದು ಊರಿನಲ್ಲಿ ನಡೆಯುವ ಬಸವಣ್ಣ ಜಾತ್ರೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಮಹಾದಾಸೆ ಹೊಂದುತ್ತಾರೆ. ಆದರೆ, ಆ ಮಕ್ಕಳಿಗೆ ಹಣದ ಕೊರತೆ ಎದುರಾಗುತ್ತದೆ. ಮನೆಯಲ್ಲಿ ಕೇಳೋಣ ಎಂದರೆ, ತಂದೆ-ತಾಯಿಯರೇ ದಿನಗೂಲಿ, ಜೀತದಾಳಾಗಿ ದುಡಿಯುವವರು. ಅವರನ್ನು ಕೇಳುವುದು ಸರಿಯಲ್ಲ ಎಂದು, ತಾವೇ ದುಡಿಮೆಗೆ ಮುಂದಾಗುತ್ತಾರೆ. ಹಾಗಾದರೆ, ಹಣಕ್ಕಾಗಿ ಅವರು ಮಾಡುವ ಕೆಲಸವೇನು? ಅವರು ಅಂದುಕೊಂಡಷ್ಟು ಹಣ ಸಂಪಾದಿಸುತ್ತಾರಾ? ಜಾತ್ರೆಗೆ ಹೋಗುತ್ತಾರಾ? ತಿಳಿಯಲು ಸಿನಿಮಾ ನೋಡಬೇಕಷ್ಟೆ. ಅರ್ಜುನ್ ಪಿ. ಡೋಣೂರ ಜವಾರಿ ಶೈಲಿಯ ಸರಳ ಕಥೆ ಹೇಳಿದ್ದಾರೆ. ಅವರೇ ಈ ಹಿಂದೆ ಹೇಳಿಕೊಂಡಿರುವಂತೆ, ಇದು ಅವರ ಬದುಕಿನ ಅನುಭವಗಳಿಂದ ಮೂಡಿದ ಕಥೆ. ಮಕ್ಕಳಿಗೆ ಆಪ್ತವಾಗುವಂತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಕೆಲವು ಕಡೆ ಇನ್ನು ಸ್ವಲ್ಪ ಕುತೂಹಲಕಾರಿಯಾಗಿ ಕಥೆ ಹೆಣೆದಿದ್ದರೆ, ಪ್ರೇಕ್ಷಕರಿಗೆ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು ಎನಿಸುತ್ತದೆ. ವಾಡಿ ಮನೆ, ಬಾವಿ, ಊರ ಅಗಸಿ ಹಾಗೂ ಜಾತ್ರೆಯ ವಾತಾವರಣವನ್ನು ಈ ಕಥೆಯ ಮೂಲಕ ಕಣ್ತುಂಬಿಕೊಳ್ಳಬಹುದು. ಬಾಲ ಕಲಾವಿದರಾದ ತೇಜಸ್, ಸಂಕಲ್ಪ, ಸುಮಿತ್ ಇಡೀ ಕಥೆಯನ್ನು ಆವರಿಸಿದ್ದು, ಸಂಗಮೇಶ್ ಉಪಾಸೆ, ನಿಧಿ ಚಕ್ರವರ್ತಿ ಪಾತ್ರಗಳು ಗಮನಸೆಳೆಯುತ್ತವೆ. ಆರವ್ ರಿಷಿಕ್ ಸಂಗೀತ ಕಥೆಗೆ ಪೂರಕವಾಗಿದೆ.
ರೇಟಿಂಗ್: 3