‘ಲಕ್ಷ್ಮೀಪುತ್ರ’ನಿಗೆ ಮುಹೂರ್ತ: ಚಿಕ್ಕಣ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಎರಡನೇ ಸಿನಿಮಾ

lakshmiputra
Published on

ಬೆಂಗಳೂರು: ‘ಕಿರಾತಕ’, ‘ರಾಜಾಹುಲಿ’, ‘ಮಾಣಿಕ್ಯ’, ‘ಅಧ್ಯಕ್ಷ’ ಸೇರಿ ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಚಿಕ್ಕಣ್ಣ ಕಳೆದ ವರ್ಷ ತೆರೆಕಂಡಿದ್ದ ‘ಉಪಾಧ್ಯಕ್ಷ’ ಮೂಲಕ ಪೂರ್ಣಪ್ರಮಾಣದ ನಾಯಕನಾಗಿದ್ದರು. ಈ ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಚಿಕ್ಕಣ್ಣ ನಾಯಕನಾಗಿ ನಟಿಸಲಿರುವ ಮತ್ತೊಂದು ಚಿತ್ರ ‘ಲಕ್ಷ್ಮೀಪುತ್ರ’ ಘೋಷಣೆಯಾಗಿತ್ತು. ‘ಲಕ್ಷ್ಮೀಪುತ್ರ’ನಿಗೆ ಎ.ಪಿ. ಅರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ಮಿಸುತ್ತಿದ್ದು, ವಿಜಯ್ ಎಸ್.ಸ್ವಾಮಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನೆರವೇರಿಸಲಾಗಿದ್ದು, ಅರ್ಜುನ್ ಗುರೂಜಿ ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಎ.ಪಿ. ಅರ್ಜುನ್, ‘ಇದು ಕರೊನಾ ಅವಧಿಯಲ್ಲಿ ಮಾಡಿದ ಕಥೆ. ತಾಯಿ-ಮಗನ ಭಾವನೆಗಳು ಇಲ್ಲಿವೆ. ಚಿಕ್ಕಣ್ಣಂಗೆ ಕಥೆ ಹೇಳಿದ್ದೆ. ಅವರೂ ಖುಷಿಯಿಂದ ಒಪ್ಪಿದರು. ಹೀಗೆ ‘ಲಕ್ಷ್ಮೀಪುತ್ರ’ ಜರ್ನಿ ಶುರುವಾಯಿತು’ ಎಂದರು. ಚಿಕ್ಕಣ್ಣ, ‘ಕಳೆದ ಜನವರಿಯಲ್ಲಿ ‘ಉಪಾಧ್ಯಕ್ಷ’ ರಿಲೀಸ್ ಆಗಿತ್ತು. ಈ ಜನವರಿಯಲ್ಲಿ ‘ಲಕ್ಷ್ಮೀಪುತ್ರ’ ಮುಹೂರ್ತ ಆಗಿದೆ. ಒಂದು ವರ್ಷವಾಯ್ತು ಒಂದು ಚಿತ್ರದಿಂದ ಇನ್ನೊಂದು ಚಿತ್ರ ಶುರುವಾಗಲು. ಒಳ್ಳೆ ಫ್ಯಾಮಿಲಿ ಕಥೆ ಮಾಡಬೇಕು ಎಂದುಕೊಂಡಾಗ, ಆ ಹುಡುಕಾಟದಲ್ಲಿ ಸಿಕ್ಕಿದ ಕಥೆಯಿದು’ ಎಂದರು. ನಟಿ ತಾರಾ ಅನುರಾಧ, ಧರ್ಮಣ್ಣ ಕಡೂರ್, ಕುರಿ ಪ್ರತಾಪ್ ಕಲಾ ಬಳಗದಲ್ಲಿದ್ದಾರೆ. ಗಿರೀಶ್ ಆರ್.ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ರವಿ ವರ್ಮಾ ಸಾಹಸ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net