

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ ಕ್ಷೇತ್ರದ ಜತೆಗೆ ಡಿಜಿಟಲ್ ವೇದಿಕೆಗೂ ಭಾರಿ ಬೇಡಿಕೆ ಇದೆ. ಸ್ಟಾರ್ ಕಲಾವಿದರು ಆ ವೇದಿಕೆಯಲ್ಲೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಈಗ ದಕ್ಷಿಣ ಭಾರತ ಮತ್ತು ಬಾಲಿವುಡ್ನಲ್ಲಿ ಖ್ಯಾತರಾಗಿರುವ ನಟಿ ಲಕ್ಷ್ಮೀ ರಾಯ್ ಸರದಿ. ಅಂದರೆ, ಈ ಹಿಂದೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ‘ಪಾಯಿಸನ್’ ಸರಣಿಯ ಮುಂದುವರಿದ ಭಾಗವಾಗಿ ಸಿದ್ಧವಾಗಿರುವ ‘ಪಾಯಿಸನ್ 2’ನಲ್ಲಿ ಬೆಂಗಳೂರು ಬೆಡಗಿ ಲಕ್ಷ್ಮೀ ಮುಖ್ಯ ಪಾತ್ರ ನಿಭಾಯಿಸಿದ್ದಾರೆ.
ಇತ್ತೀಚೆಗಷ್ಟೇ ಅದರ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಏಪ್ರಿಲ್ 30ಕ್ಕೆ ಜೀ5ನಲ್ಲಿ ಪ್ರಸಾರವಾಗಲಿದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಲಕ್ಷ್ಮೀ ಅವರದ್ದು ಪರಿಚಯಸ್ಥ ಮುಖ, ಬಾಲಿವುಡ್ ಮಂದಿಗೂ ಇವರು ಗೊತ್ತು. ‘ಅಕಿರಾ’ ಮೂಲಕ ಬಾಲಿವುಡ್ ಕದ ತಟ್ಟಿದ್ದ ಲಕ್ಷ್ಮೀ, ಬಳಿಕ ‘ಜೂಲಿ’ ಸಿನಿಮಾದಲ್ಲಿ ಬೋಲ್ಡ್ ಅವತಾರ ತಾಳಿದ್ದರು. ಈಗ ‘ಪಾಯಿಸನ್ 2’ ಮೂಲಕ ಹಿಂದಿ ವೆಬ್ ಸೀರಿಸ್ಗೆ ಬಂದಿದ್ದಾರೆ.
ವಿಶೇಷ ಏನೆಂದರೆ ನಟ ಅಫ್ತಾಬ್ ಶಿವದಾಸನಿ ಸಹ ಇದೇ ಸಿರೀಸ್ ಮೂಲಕ ಡಿಜಿಟಲ್ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ. ಥ್ರಿಲ್ಲರ್ ಮತ್ತು ರಿವೆಂಜ್ ಹಿನ್ನೆಲೆಯಲ್ಲಿ ವೆಬ್ಸರಣಿ ಮೂಡಿಬಂದಿದ್ದು, ವಿಶಾಲ್ ಪಾಂಡ್ಯ ನಿರ್ದೇಶನ ಮಾಡಿದ್ದಾರೆ. ‘ಪನೋರಮಾ ಎಂಟರ್ಟೇನ್ವೆುಂಟ್’ ಬ್ಯಾನರ್ನಲ್ಲಿ ಸುಝಾನಾ ಘಾಯ್ ಬಂಡವಾಳ ಹೂಡಿದ್ದಾರೆ.
ಇನ್ನು ಕನ್ನಡದಲ್ಲಿ ಗುರುಪ್ರಸಾದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಝಾನ್ಸಿ’ ಸಿನಿಮಾದಲ್ಲಿ ಖಡಕ್ ಐಪಿಎಸ್ ಅಧಿಕಾರಿಯಾಗಿ ಲಕ್ಷ್ಮೀ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ತಮಿಳಿನ ‘ಸಿಂಡ್ರೆಲಾ’ ಮತ್ತು ‘ಮುರುಗ’ ಚಿತ್ರದಲ್ಲೂ ಲಕ್ಷ್ಮೀ ಬಿಜಿಯಾಗಿದ್ದಾರೆ.