

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಒಂದೇ ಲಕ್ಷ್ಯದಿಂದ ನಾನಾ ಪ್ರಯತ್ನಗಳನ್ನು ಮಾಡುವವರ ಮಧ್ಯೆ ಇಲ್ಲೊಬ್ಬರು ಅದೃಷ್ಟವಶಾತ್ ನಟಿ ಆಗಿದ್ದಾರೆ. ವಿಶೇಷವೆಂದರೆ ಇವರ ಮೊದಲ ಚಿತ್ರವೇ ಮೂರು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಇನ್ನು ಪ್ರಪ್ರಥಮ ಚಿತ್ರ ತೆರೆ ಕಾಣುವ ಮೊದಲೇ ಇವರು ಇನ್ನೆರಡು ಚಿತ್ರಗಳಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ಹೀಗೆ ಲಕ್ಷ್ಯವಹಿಸದೆ ನಟಿಯಾದವರು ಕರಾವಳಿ ಹುಡುಗಿ ಲಕ್ಷ ಶೆಟ್ಟಿ.
ಹೌದು.. ಮುಂಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು ಒಂದು ದಿನ ಫೇಸ್ಬುಕ್ನಲ್ಲಿ ಹಾಕಿದ್ದ ಫೋಟೋಗಳೇ ಇವರನ್ನು ಸ್ಯಾಂಡಲ್ವುಡ್ನತ್ತ ಕರೆತಂದಿವೆ. ‘ಒಮ್ಮೆ ಹೀಗೆ ಟೈಮ್ಾಸ್ಗೆಂದು ಫೋಟೋಶೂಟ್ ಮಾಡಿಸಿಕೊಂಡಿದ್ದೆ, ಆ ಫೋಟೋ ಫೇಸ್ಬುಕ್ನಲ್ಲಿ ಹಾಕಿದ್ದಾಗ ಅದನ್ನು ನೋಡಿದ ಕವೀಶ್ ಶೆಟ್ಟಿ ಅವರು ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟರು. ನಾನೂ ನಟಿಸಬಲ್ಲೆ ಅಂತ ಇನ್ನೊಬ್ಬರಿಗೇ ಅನಿಸಿರುವಾಗ ನಾನ್ಯಾಕೆ ನಟಿಸಬಾರದು? ಒಂದು ಪ್ರಯತ್ನ ಮಾಡೋಣ ಅಂತ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದುಬಿಟ್ಟೆ’ ಎನ್ನುತ್ತಾರೆ ಲಕ್ಷ ಶೆಟ್ಟಿ.
ಹಾಗೆ ಅಂದು ಇವರು ಆಯ್ಕೆ ಆಗಿದ್ದು ಕವೀಶ್ ಶೆಟ್ಟಿ ನಿರ್ವಣ, ನಿರ್ದೇಶನದ ಜತೆಗೆ ನಾಯಕನಾಗಿ ಕಾಣಿಸಿಕೊಂಡಿರುವ ‘ಜಿಲ್ಕ’ ಸಿನಿಮಾಗೆ. ಕನ್ನಡ ಮಾತ್ರವಲ್ಲದೆ ಹಿಂದಿ ಹಾಗೂ ಮರಾಠಿಯಲ್ಲೂ ನಿರ್ವಣವಾಗಿರುವ ಈ ಸಿನಿಮಾದ ಕನ್ನಡ ಆವೃತ್ತಿ ಫೆ. 7ರಂದು ಬಿಡುಗಡೆ ಆಗಲಿದೆ. ‘‘ಜಿಲ್ಕ’ದಲ್ಲಿ ಮಾಡುತ್ತಿರುವಾಗಲೇ ‘ಧೀರನ್’ ಎಂಬ ಇನ್ನೊಂದು ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಸ್ವಾಮಿ ಅವರ ನಿರ್ದೇಶನ ಹಾಗೂ ನಾಯಕತ್ವದ ಈ ಸಿನಿಮಾದಲ್ಲಿ ನಾಯಕಿ ಆಗಿ ನಟಿಸಿದ್ದೇನೆ. ಇದರ ಶೂಟಿಂಗ್ ಮುಗಿದಿದೆ. ಬಳಿಕ ತುಳು ಸಿನಿಮಾ ‘ಶಕಲಕ ಬೂಮ್ ಬೂಮ್ನಲ್ಲೂ ನಾಯಕಿಯ ಪಾತ್ರ ಸಿಕ್ಕಿದ್ದು, ಚಿತ್ರೀಕರಣ ಬಹುತೇಕ ಮುಗಿದಿದ್ದು, ಸಾಂಗ್ ಶೂಟಿಂಗ್ ಮಾತ್ರ ಬಾಕಿ ಇದೆ. ಈ ಮಧ್ಯೆ ಕನ್ನಡದ ‘ಶೋಕಿವಾಲಾ’ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರ ಮಾಡಿದ್ದೇನೆ. ಅಲ್ಲದೆ ಹಿಂದಿಯ ‘ಸ್ಟೋನ್’ ಎಂಬ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅದಿನ್ನೂ ನಿರ್ಮಾಣ ಹಂತದಲ್ಲಿದೆ’ ಎಂಬ ಮಾಹಿತಿ ನೀಡುತ್ತಾರೆ ಲಕ್ಷ.
‘ನನ್ನ ಅಕ್ಕ ಚೈತ್ರಾ ಶೆಟ್ಟಿ ತುಳು ಚಿತ್ರ ನಟಿ, ರಂಗಭೂಮಿ ಕಲಾವಿದೆ. ನಾಟಕದಲ್ಲಿ ಸುಮಾರು 2 ಸಾವಿರ ಪ್ರದರ್ಶನಗಳನ್ನು ನೀಡಿದ್ದಾಳೆ. ಆದರೂ ನನಗೆ ನಟಿ ಆಗಬೇಕು ಎಂಬ ಕನಸೇನೂ ಇರಲಿಲ್ಲ.
ಫೇಸ್ಬುಕ್ನಲ್ಲಿ ಹಾಕಿದ್ದ ಒಂದು ಫೋಟೋ ಚಿತ್ರರಂಗಕ್ಕೆ ಕರೆತಂದಿತು. ಈಗ ನಾಯಕಿ ಆಗಿಯೇ 3 ಚಿತ್ರಗಳಲ್ಲಿ ನಟಿಸಿದ್ದೇನೆ. ಇನ್ನೊಂದು ತುಳು, ಕನ್ನಡದ 2-3 ಚಿತ್ರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ’ ಎನ್ನುತ್ತಾರೆ ಲಕ್ಷ.
ಕೆಲಸ ಬೇಕಿದ್ದರೆ ಈಗ ವಾಪಸ್ ಹೋದರೂ ಸಿಗುತ್ತದೆ. ಆದರೆ ಸಿನಿಮಾ ಅವಕಾಶ ಬೇಕೆಂದಾಗ ಸಿಗುವುದಿಲ್ಲ, ಒಂದು ಸಲ ನೋಡೋಣ ಎಂದು ಕೆಲಸ ಬಿಟ್ಟು ಬಂದೆ. ಸದ್ಯಕ್ಕಂತೂ ಇಲ್ಲೇ ಮುಂದುವರಿಯುವ ಯೋಚನೆ ಮಾಡಿದ್ದೇನೆ. | ಲಕ್ಷ ಶೆಟ್ಟಿ ನಟಿ