

ಅಮೀರ್ ಖಾನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡು ವರ್ಷಗಳೇ ಆಗಿವೆ. 2018ರ ಡಿಸೆಂಬರ್ನಲ್ಲಿ ಬಿಡುಗಡೆಯಾದ 'ಥಗ್ಸ್ ಆಫ್ ಹಿಂದೂಸ್ಥಾನ್' ಚಿತ್ರವೇ ಕೊನೆ. ಆ ನಂತರ ಅಮೀರ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅಮೀರ್ ಅಭಿನಯದ ಹೊಸ ಚಿತ್ರ 'ಲಾಲ್ ಸಿಂಗ್ ಛಡ್ಡಾ', ಈ ವರ್ಷದ ಕೊನೆಗೆ, ಕ್ರಿಸ್ಮಸ್ ಹೊತ್ತಿಗೆ ಬಿಡುಗಡೆಯಾಗಿದೆ. ಈಗ ಬಂದಿರುವ ಸುದ್ದಿಯ ಪ್ರಕಾರ, ಈ ಚಿತ್ರ ಅನಾಮತ್ತು ಒಂದು ವರ್ಷ ಮುಂದಕ್ಕೆ ಹೋಗಿದೆ. ಅಂದರೆ, ಈ 2020ರ ಕ್ರಿಸ್ಮಸ್ಗೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ, 2021ರ ಕ್ರಿಸ್ಮಸ್ಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಹಾಲಿವುಡ್ ಚಿತ್ರ 'ಫಾರೆಸ್ಟ್ ಗಂಪ್'ನಿಂದ ಸ್ಫೂರ್ತಿ ಪಡೆದ 'ಲಾಲ್ ಸಿಂಗ್ ಚಡ್ಢಾ'ದ ಚಿತ್ರೀಕರಣ ಈ ವರ್ಷದ ಆರಂಭದಲ್ಲೇ ಶುರುವಾಗಿತ್ತು. ಆದರೆ, ಲಾಕ್ಡೌನ್ನಿಂದ ಅರ್ಧದಲ್ಲೇ ನಿಂತಿತ್ತು. ಈಗ ಲಾಕ್ಡೌನ್ ತೆರವಾಗಿ, ಚಿತ್ರೀಕರಣ ಪ್ರಾರಂಭಿಸಬಹುದಾಗಿದೆಯಾದರೂ, ಅಲ್ಲೊಂದು ಸಮಸ್ಯೆ ಎದುರಾಯಿತು.
ಚಿತ್ರವನ್ನು ಲಡಾಖ್ನಲ್ಲಿ ಚಿತ್ರೀಕರಿಸಬೇಕು ಎಂಬುದು ಅಮೀರ್ ಖಾನ್ ಆಸೆಯಾಗಿತ್ತು. ಲಡಾಖ್ನಲ್ಲಿ ಒಂದಿಷ್ಟು ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಈ ಮುನ್ನ ಸಿದ್ಧತೆ ನಡೆಸಿತ್ತು. ಈ ನಡುವೆ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾಗಿದ್ದರಿಂದ, ಲಡಾಖ್ ಬಿಟ್ಟು ಕಾರ್ಗಿಲ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿತ್ತು.
ಇನ್ನೇನು ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಕಾರ್ಗಿಲ್ನಲ್ಲಿ ನಡೆಯಲಿದೆ ಅಂತ ಎಲ್ಲರೂ ಅಂದುಕೊಂಡರೆ, ಚಿತ್ರತಂಡ ಟರ್ಕಿಗೆ ಚಿತ್ರೀಕರಣವನ್ನು ಶಿಫ್ಟ್ ಮಾಡಿತು. ಅದರಂತೆ, ಅಮೀರ್ ಖಾನ್ ಸೇರಿದಂತೆ ಚಿತ್ರತಂಡದವರು ಇಂದು ಟರ್ಕಿಗೆ ಪ್ರಯಾಣ ಬೆಳೆಸಿದ್ದೂ ಆಗಿದೆ. ಆದಷ್ಟು ಬೇಗ ಚಿತ್ರತಂಡದವರು, ಚಿತ್ರೀಕರಣ ಮುಗಿಸಿ, ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆ ಮಾಡಲಿದ್ದಾರೆ ಎಂದು ಜನ ಅಂದುಕೊಂಡಿದ್ದಷ್ಟೇ ಬಂತು. ಈಗ ಚಿತ್ರದ ಬಿಡುಗಡೆ ಒಂದು ವರ್ಷ ಮುಂದಕ್ಕೆ ಹೋಗಿದೆ.
'ಲಾಲ್ ಸಿಂಗ್ ಛಡ್ಡಾ' ಚಿತ್ರದಲ್ಲಿ ಅಮೀರ್ ಖಾನ್ ಜತೆಗೆ ಕರೀನಾ ಕಪೂರ್, ವಿಜಯ್ ಸೇತುಪತಿ ಮುಂತಾದವರು ನಟಿಸಿದ್ದು, ಅದ್ವೈತ್ ಚಂದನ್ ನಿರ್ದೇಶನ ಮಾಡುತ್ತಿದ್ದಾರೆ.