Neethi Movie Review; ಸಾವು- ಬದುಕಿನ ರೀತಿ, ಹೊಸ ನೀತಿ

SC
Published on

| ಹರ್ಷವರ್ಧನ್​ ಬ್ಯಾಡನೂರು

ಚಿತ್ರ: ನೀತಿ

ನಿರ್ದೇಶಕ: ರಾಜಗೋಪಾಲ್​

ತಾರಾಗಣ: ಖುಷಿ ರವಿ, ಸಂಪತ್​ ಮೈತ್ರೇಯ, ಪ್ರವಿಣ್​ ಅಥರ್ವ, ಸುಜಿತ್​, ಶ್ರೀನಾಥ್​ ಕೆ.ಎಸ್​

ಶ್ರೀಮಂತ ಮನೆತನದ ನೀತಿ (ಖುಷಿ) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಪ್ರತಾಪ್​ಗೆ (ಸಂಪತ್​) ತೀವ್ರ ಹಣದ ಅನಿವಾರ್ಯವಿರುತ್ತದೆ. ಹೀಗಾಗಿ ಮೊದಲ ಬಾರಿಗೆ ಕಳ್ಳತನಕ್ಕಿಳಿಯುತ್ತಾನೆ. ಆದರೆ, ಆತ ಕನ್ನ ಹಾಕಲು ಆಯ್ಕೆ ಮಾಡಿಕೊಳ್ಳುವುದು ಇದೇ ನೀತಿ ಮನೆಯನ್ನು. ಬದುಕು ಚೆಲ್ಲಲು ಹೊರಟ ಖುಷಿ ಮತ್ತು ಬದುಕಲು ಹವಣಿಸುತ್ತಿರುವ ಪ್ರತಾಪ್​ ಮುಖಾಮುಖಿಯಾಗುತ್ತಾರೆ. ಅಲ್ಲಿಂದ ಅವರ ಹಿನ್ನೆಲೆ ತೆರೆದುಕೊಳ್ಳುತ್ತದೆ. ಖುಷಿ ಆತ್ಮಹತ್ಯೆಗೆ ನಿರ್ಧರಿಸಲು ಕಾರಣವೇನು? ಪ್ರತಾಪ್​ಗೆ ಅಷ್ಟೊಂದು ಹಣದ ಅವಶ್ಯಕತೆ ಏಕೆ? ಖುಷಿ ಸಾಯುತ್ತಾಳಾ? ಪ್ರತಾಪ್​ ಬದುಕುತ್ತಾನಾ? ಅಥವಾ ಇಬ್ಬರ ನಿರ್ಧಾರಗಳ ಹಿಂದೆ ಬೇರೆಯದೇ ವಿಷಯಗಳಿರುತ್ತವಾ? ಹೀಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕೆಂದರೆ, "ನೀತಿ' ಸಿನಿಮಾ ನೋಡಿ.

ನಿರ್ದೇಶಕ ರಾಜಗೋಪಾಲ್​ "ನೀತಿ' ಮೂಲಕ ಒಂದೊಳ್ಳೆ ಸಸ್ಪೆನ್ಸ್​ ಥ್ರಿಲ್ಲರ್​ ಡ್ರಾಮಾ ಕಥೆಯನ್ನು ಜನರ ಮುಂದಿಟ್ಟಿದ್ದಾರೆ. ಬಹುತೇಕ ಕಥೆ ಒಂದೇ ಮನೆಯಲ್ಲಿ, ನೀತಿ ಮತ್ತು ಪ್ರತಾಪ್​ ಸುತ್ತ ಸಾಗುತ್ತದೆ. ಹಿನ್ನೆಲೆ ತೆರೆದುಕೊಂಡಾಗ ಮಾತ್ರ ಉಳಿದ ಮೂರು ಪಾತ್ರಗಳು ಬರುತ್ತವಷ್ಟೇ. ಹೀಗೆ ಕೆಲವೇ ಪಾತ್ರಗಳನ್ನಿಟ್ಟುಕೊಂಡು, ಗಟ್ಟಿ ಚಿತ್ರಕಥೆ ಕಟ್ಟಿಕೊಂಡು 105 ನಿಮಿಷಗಳ ಒಂದು ಥ್ರಿಲ್ಲಿಂಗ್​ ಅನುಭವ ನೀಡುತ್ತಾರೆ ನಿರ್ದೇಶಕರು. ಸಾಮಾನ್ಯವಾಗಿ ಸಸ್ಪೆನ್ಸ್​ ಥ್ರಿಲ್ಲರ್​ಗಳಲ್ಲಿ ಮುಂದೆ ಹೀಗೆ ಆಗುತ್ತದೆ ಅಂತ ಊಹಿಸಬಹುದು. ಆದರೆ, ಅದನ್ನೂ ಮೀರಿದ ಟರ್ನ್​​ಗಳು, ಭಾವನಾತ್ಮಕ ಅಂಶಗಳಿರುವುದು ಚಿತ್ರಕ್ಕೆ ಪ್ಲಸ್​ ಆಗಿದೆ. ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿರುವ ಹಿನ್ನೆಲೆ ಸಂಗೀತ ಚಿತ್ರವನ್ನು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿಸುತ್ತದೆ. ಇನ್ನು ಖುಷಿ ರವಿ ಮತ್ತು ಸಂಪತ್​ ಮೈತ್ರೇಯ ನಟನೆಯ ಮೂಲಕವೇ ಪ್ರೇಕ್ಷಕರನ್ನು ಕಥೆಯೊಳಗೆ ಸೆಳೆದುಕೊಳ್ಳುತ್ತಾರೆ. ಇನ್ನೇನು ಕಥೆ ನಿಧಾನವಾಯಿತು ಎನ್ನುತ್ತಿರುವಾಗಲೇ ಬರುವ ಟ್ವಿಸ್ಟ್​ಗಳು ಪ್ರೇಕ್ಷಕರನ್ನು ಮತ್ತೆ ಬಡಿದೆಬ್ಬಿಸುತ್ತವೆ. ಆ ನಿಟ್ಟಿನಲ್ಲಿ "ನೀತಿ' ಒಂದೊಳ್ಳೆ ಪ್ರಯತ್ನ. ಹೀಗಾಗಿ ಒಮ್ಮೆ ನೋಡಲಡ್ಡಿಯಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net