

ಬೆಂಗಳೂರು: ರಾಜ್ಯ ಪ್ರಶಸ್ತಿ ವಿಜೇತ ‘ಹೂವಿನ ಹಾರ’ ಖ್ಯಾತಿಯ ನಿರ್ದೇಶಕ ಸಿದ್ದೇಗೌಡ ಜಿ.ಬಿ.ಎಸ್ ಆ್ಯಕ್ಷನ್-ಕಟ್ ಹೇಳಿರುವ ಚಿತ್ರ ‘ಕುಂಟೆಬಿಲ್ಲೆ’. ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳನ್ನು ಶುರು ಮಾಡಿಕೊಂಡಿದೆ. ರಂಗಭೂಮಿ ಹಿನ್ನೆಲೆಯ ಯದು ಮುಖ್ಯಭೂಮಿಕೆಯಲ್ಲಿದ್ದು, ‘ಕೃಷ್ಣ ತುಳಸಿ’ ನಟಿ ಮೇಘಶ್ರೀ ಅವರಿಗೆ ಜೋಡಿಯಾಗಿದ್ದಾರೆ. ಚಿತ್ರದ ಬಗ್ಗೆ ಸಿದ್ದೇಗೌಡ, ‘ಇದೊಂದು ನೈಜ ಘಟನೆಯಾಧಾರಿತ ಸಿನಿಮಾ. ಆ ಘಟನೆಯನ್ನು ಉಲ್ಲೇಖಿಸಿದರೆ ಇಡೀ ಚಿತ್ರಕಥೆಯನ್ನು ಬಿಟ್ಟುಕೊಟ್ಟಂತಾಗುತ್ತದೆ. ಆ ಕುತೂಹಲ ಇರಲಿ. ‘ಕುಂಟೆಬಿಲ್ಲೆ’ ಶೀರ್ಷಿಕೆಯನ್ನು ನೋಡಿ ಇದು ಮಕ್ಕಳ ಸಿನಿಮಾ ಎಂದು ಕೇಳುವವರು ಇದ್ದಾರೆ. ಆದರೆ, ಇದು ಇಬ್ಬರು ಪ್ರೇಮಿಗಳ ಸುತ್ತ ನಡೆಯುವ ಕಥೆ. ಈ ಆಧುನೀಕರಣದಲ್ಲಿ ಪ್ರೀತಿಗೆ ಕುಟುಂಬ ಹಾಗೂ ಸಮಾಜದಿಂದ ಹಲವಾರು ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತವೆ. ಇಂತಹ ಸಮಯದಲ್ಲಿ ಪ್ರೇಮಿಗಳು ಮುಂದಿನ ನಡೆ ಏನು ಎಂಬುದೇ ಚಿತ್ರದ ಒನ್‌ಲೈನ್. ಪ್ರೀತಿ-ಪ್ರೇಮದ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಕ್ರೈಂ ಅಂಶಗಳೂ ಇವೆ. ಹಾಗಾಗಿ, ಇದು ಹೊಸ ಬಗೆಯ ಸಿನಿಮಾ ಅಂತನ್ನಿಸಬಹುದು. ಮೈಸೂರು, ಗುಂಡ್ಲುಪೇಟೆ, ಎಚ್.ಡಿ.ಕೋಟೆ ಹಾಗೂ ವಿವಿಧ ಲೋಕೇಷನ್‌ಗಳಲ್ಲಿ 38 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಸದ್ಯ ರೀ-ರೆಕಾರ್ಡಿಂಗ್ ನಡೆಯುತ್ತಿದೆ. ಸೆನ್ಸಾರ್ ಆದ ಕೂಡಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದೇವೆ. ಹೊಸ ಅನುಭವ ನೀಡುವ ಸಿನಿಮಾ ಖಂಡಿತ ಗೆದ್ದೇ ಗೆಲ್ಲುತ್ತದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ. ಯದು, ಮೇಘಶ್ರೀ ಜತೆಗೆ ಸುಚೇಂದ್ರ ಪ್ರಸಾದ್, ಸುಧಾ ಬೆಳವಾಡಿ, ಶಂಕರ್ ಅಶ್ವತ್ಥ್, ಭವಾನಿ ಪ್ರಕಾಶ್ ಕಲಾಬಳಗದಲ್ಲಿದ್ದಾರೆ.