ನೈಜ ಕಥೆಯಲ್ಲಿ ಕುಂಕುಮ್: ಅವಿರಾಮ್ ಕಂಠೀರವ ನಿರ್ದೇಶನದ ‘ಕರಳೆ’ ಸಿನಿಮಾದಲ್ಲಿ ಡಿ-ಗ್ಲಾಮರ್ ಪಾತ್ರ

kumkum 1
Published on

ಬೆಂಗಳೂರು: ಕನ್ನಡದ ‘ಬ್ಯಾಕ್ ಬೆಂಚರ್ಸ್’ ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ನಟಿ ಕುಂಕುಮ್ ಹರಿಹರ ಇದೀಗ ‘ಕರಳೆ’ ಸಿನಿಮಾದಲ್ಲಿ ಡಿ-ಗ್ಲಾಮರ್ ರೋಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ‘ಕಲಿವೀರ’, ‘ಕನ್ನಡ ದೇಶದೋಳ್’ ಖ್ಯಾತಿಯ ನಿರ್ದೇಶಕ ಅವಿರಾಮ್ ಕಂಠೀರವ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಎರಡು ಹಂತದ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಶನಿವಾರ ಮಹಿಳಾ ದಿನಾಚರಣೆ ಅಂಗವಾಗಿ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಗೊಳಿಸಿದೆ. ಪಾತ್ರದ ಬಗ್ಗೆ ಕುಂಕುಮ್, ‘ರಿಯಲ್ ಸ್ಟೋರಿಯಾದ ಕಾರಣ ಸದ್ಯಕ್ಕೆ ‘ಕರಳೆ’ಯ ಕಥೆ ಬಗ್ಗೆ ಹೇಳುವಂತಿಲ್ಲ. ಆದರೆ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾನು ‘ದೇವಕಿ’ ಎಂಬ ಪಾತ್ರ ನಿರ್ವಹಿಸುತ್ತಿದ್ದೇನೆ. ಸಮಾಜದ ವಾಸ್ತವ ಅಂಶಗಳನ್ನೇ ಇಲ್ಲಿ ಚಿತ್ರಿಸಲಾಗುತ್ತಿದೆ. ನನ್ನ ಕರಿಯರ್‌ನಲ್ಲಿ ಇಂತಹ ಪಾತ್ರ ಮಾಡಿದ್ದೇನೆ ಎಂಬುದು ಮುಂದೆ ದಾಖಲೆಯಾಗಿ ಉಳಿಯಲಿದೆ. ಎಮೋಷನಲ್, ರಾ, ಮನಕಲುಕುವ ದೃಶ್ಯಗಳು ಚಿತ್ರದಲ್ಲಿವೆ. ನಾನಂತೂ ನನ್ನ ಪಾತ್ರವನ್ನು ಎಂಜಾಯ್ ಮಾಡುತ್ತಿದ್ದೇನೆ. ಈಗಾಗಲೇ ಚಿಂತಾಮಣಿ, ಮದ್ದೂರು, ಹುಲಿರಾಯನದುರ್ಗ ಸೇರಿ ಹಲವು ಕಡೆ ಶೂಟಿಂಗ್ ನಡೆಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ.

ಕನ್ನಡ, ಚೈನೀಸ್ ಭಾಷೆಯಲ್ಲಿ ಸಿನಿಮಾ: ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದ್ದು, ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನಡೆಸುತ್ತಿದ್ದಾರೆ. ‘ಎರಡು ದೇಶಗಳಲ್ಲಿ ನಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ-ಚೀನಿ ಭಾಷೆಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದೇವೆ. ಡಾಕ್ ರ್ ಶೇಡ್‌ನಲ್ಲಿ ಮೇಕಿಂಗ್ ಮಾಡಲಾಗುತ್ತಿದೆ. ಈಗಾಗಲೇ 52 ದಿನಗಳ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಇನ್ನು 20 ದಿನಗಳ ಶೂಟಿಂಗ್ ಬಾಕಿಯಿದೆ. ಮುಂದೆ ಸಿನಿಮಾ ಚೆನ್ನಾಗಿ ಮೂಡಿಬಂದರೆ, ಪ್ಯಾನ್ ಇಂಡಿಯಾ ರೂಪದಲ್ಲಿ ತರಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಕುಂಕುಮ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net