ಸಲ್ಮಾನ್​ ಖಾನ್​ ಕಾಲಿಗೆ ಬಿದ್ದರೂ ವಿಮರ್ಶೆ ಮಾಡೋದು ನಿಲ್ಲಿಸಲ್ಲ: ಕೆಆರ್​ಕೆ

KRK - Salman Khan - Final
Published on

ಮುಂಬೈ: ಇನ್ನು ಮುಂದೆ ಸಲ್ಮಾನ್​ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಹೇಳಿದ್ದ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ, ಇದೀಗ ಉಲ್ಟಾ ಹೊಡೆದಿದ್ದಾರೆ. ಸಲ್ಮಾನ್​ ಖಾನ್​ ಬಂದು ಕಾಲು ಹಿಡಿದುಕೊಂಡರೂ, ಅವರ ಚಿತ್ರಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ರಾಧೇ ಚಿತ್ರದ ವಿಮರ್ಶೆ ಮಾಡುವುದರ ಜತೆಗೆ, ಅದು ಸಲ್ಮಾನ್​ ಅವರ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಚಿತ್ರ ಎಂದು ಕೆಆರ್​ಕೆ ಇತ್ತೀಚೆಗಷ್ಟೇ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್​, ಕೆಆರ್​ಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​ ಹೂಡಿದ್ದರು. ಇದರಿಂದ ವಿಚಲಿತರಾಗಿದ್ದ ಕೆಆರ್​ಕೆ, ರಾಧೇ ಚಿತ್ರದ ವಿಮರ್ಶೆಯನ್ನು ಆನ್​ಲೈನ್​ನಿಂದ ಡಿಲೀಟ್​ ಮಾಡುವುದರ ಜತೆಗೆ, ಇನ್ನು ಮುಂದೆ ಸಲ್ಮಾನ್​ ಚಿತ್ರಗಳ ವಿಮರ್ಶೆಯನ್ನೇ ಮಾಡುವುದಿಲ್ಲ ಎಂದು ಹೇಳಿದ್ದರು. ಇದೀಗ ಅವರು ಉಲ್ಟಾ ಹೊಡೆದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಾಮಾನ್ಯವಾಗಿ ಯಾರಾದರೂ ನಿರ್ಮಾಪಕರು ಅಥವಾ ನಿರ್ದೇಶಕರು ತಮ್ಮ ಚಿತ್ರಗಳ ವಿಮರ್ಶೆ ಮಾಡಬೇಡಿ ಎಂದರೆ, ನಾನು ವಿಮರ್ಶೆ ಮಾಡುವುದಕ್ಕೆ ಹೋಗುವುದಿಲ್ಲ. ಆದರೆ, ಸಲ್ಮಾನ್​ ಖಾನ್​ ಮಾತ್ರ ನನ್ನ ಕಾಲು ಹಿಡಿದುಕೊಂಡರೂ, ನಾನು ಅವರ ಚಿತ್ರಗಳನ್ನು ವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ. ವಿಮರ್ಶೆ ಮಾಡುವುದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ಸಲ್ಮಾನ್​ ಖಾನ್​ಗೆ ತಮ್ಮನ್ನು ಕಂಡರೆ ಭಯ ಎನ್ನುವ ಕೆಆರ್​ಕೆ, ಚಿತ್ರವನ್ನು ನೋಡಿರುವ ಎಲ್ಲರೂ ಚಿತ್ರ ಚೆನ್ನಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಅವರ್ಯಾರ ವಿಮರ್ಶೆಗಳ ಬಗ್ಗೆಯೂ ಸಲ್ಮಾನ್​ಗೆ ಬೇಸರವಿಲ್ಲ, ನನ್ನ ವಿಮರ್ಶೆಯೊಂದನ್ನು ಬಿಟ್ಟು. ನಾನೆಂತಹ ವಿಮರ್ಶಕ ಎಂಬುದನ್ನು ಇದು ತೋರಿಸುತ್ತದೆ ಮತ್ತು ಬಾಲಿವುಡ್​ನ ಇತಿಹಾಸದಲ್ಲೇ ನಾನು ನಂಬರ್​ ಒನ್​ ವಿಮರ್ಶಕ ಎಂಬ ವಿಷಯವನ್ನು ಯಾರೂ ಅಲ್ಲಗೆಳೆಯುವುದಕ್ಕೆ ಸಾಧ್ಯವೇ ಇಲ್ಲ. ಮಿಕ್ಕೆಲ್ಲರೂ ಅಷ್ಟಕ್ಕಷ್ಟೇ ಎಂದು ಕೆಆರ್​ಕೆ ಹೇಳಿದ್ದಾರೆ.

ರಾಧೇ ಚಿತ್ರವು ಬಹಳ ಸಾಧಾರಣವಾಗಿದೆ ಎಂದು ಸಲ್ಮಾನ್​ ತಂದೆ ಸಲೀಮ್​ ಖಾನ್ ಹೇಳಿರುವುದನ್ನು ಉದಾಹಿರಿಸಿರುವ ಕೆಆರ್​ಕೆ, ಅವರ ತಂದೆಯೇ ಅದೊಂದು ಕೆಟ್ಟ ಚಿತ್ರ ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ, ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವ ಬದಲು ಅದೊಂದು ಕೆ್ಟ್ಟ ಚಿತ್ರ ಎಂಬುದನ್ನು ಒಪ್ಪಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸತ್ಯದ ಪರವಾಗಿ ನಿಂತಿದ್ದಿಕ್ಕೆ ಅವರಿಗೆ ಧನ್ಯವಾದಗಳು ಎಂದು ಕೆಆರ್​ಕೆ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net