

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಯಾವುದಾದರೂ ಚಿತ್ರ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ ಎಂದರೆ ಅದು ಪ್ರಭಾಸ್ ಅಭಿನಯದ 'ಆದಿಪುರುಷ್'. ರಾಮಾಯಣದ ಕುರಿತಾದ ಈ ಚಿತ್ರದಲ್ಲಿ ಪ್ರಭಾಸ್ ರಾಮನಾದರೆ, ಸೀತೆಯಾಗಿ ಯಾರು ನಟಿಸಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಈ ಪಾತ್ರಕ್ಕೆ ಬಾಲಿವುಡ್ ನಟಿ ಕೃತಿ ಸನೋನ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ‘ಪವರ್ ಆಫ್ ಯೂಥ್’ ಲಿರಿಕಲ್ ವೀಡಿಯೋ ಬಿಡುಗಡೆ …
ಮುಂಚೆ ಇದೇ ಪಾತ್ರಕ್ಕೆ ಕೀರ್ತಿ ಸುರೇಶ್ ಸೇರಿದಂತೆ ಹಲವು ನಾಯಕಿಯರನ್ನು ಸಂಪರ್ಕಿಸಲಾಗಿತ್ತು. ಒಂದು ಹಂತದಲ್ಲಿ ಆಲಿಯಾ ಭಟ್ ನಾಯಕಿಯಾಗಬಹುದು ಎಂದು ಹೇಳಲಾಗಿತ್ತು. ಅವರು, ಇವರು ಅಂತೆಲ್ಲಾ ಆಗಿ ದೀಪಿಕಾ ಪಡುಕೋಣೆ, ಈ ಪಾತ್ರಕ್ಕೆ ಪರ್ಫೆಕ್ಟ್ ಚಾಯ್ಸ್ ಎಂದು ಚಿತ್ರತಂಡ ತೀರ್ಮಾನಿಸಿತ್ತು. ಆದರೆ, ಕೊನೆಗೆ ಅವರನ್ನು ಕೈಬಿಟ್ಟು, ಕೃತಿಗೆ ಕೊಟ್ಟಿದ್ದಿಕ್ಕೂ ಕಾರಣವಿದೆ.
ಪ್ರಮುಖವಾಗಿ ದೀಪಿಕಾ ಮತ್ತು ಪ್ರಭಾಸ್ ಇಬ್ಬರೂ ನಾಗ್ ಅಶ್ವಿನ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈಗಾಗಲೇ ಇಬ್ಬರೂ ನಟಿಸುತ್ತಿರುವ ಸುದ್ದಿಯಾಗಿರುವುದರಿಂದ, ಮತ್ತೊಮ್ಮ ಅವರಿಬ್ಬರನ್ನೇ ರಿಪೀಟ್ ಮಾಡಿದರೆ ಅವರ ಜೋಡಿ ಫ್ರೆಶ್ ಎಂದನಿಸುವುದಿಲ್ಲ ಎಂಬ ಅಭಿಪ್ರಾಯ ಚಿತ್ರತಂಡದವರಲ್ಲಿ ವ್ಯಕ್ತವಾಗಿದೆ. ಹಾಗಾಗಿ ದೀಪಿಕಾ ಅವರನ್ನು ಬಿಟ್ಟು ಕೃತಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಭಾಸ್ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗೆ ನಟಿಸುವುದಕ್ಕೆ ಕೃತಿ ಬಹಳ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದಾದ ಹಿಂದಿಯ 'ತಾನ್ಹಾಜಿ' ಚಿತ್ರವನ್ನು ನಿರ್ದೇಶಿಸಿರುವ ಓಂ ರೌತ್, 'ಆದಿಪುರುಷ್' ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಾವಣನಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.