ರಶ್ಮಿಕಾ ಹುಟ್ಟುಹಬ್ಬಕ್ಕೆ ಇದೆಂಥಾ ಕ್ರೇಜ್! ... ಸಿಡಿಪಿ ಬಿಡುಗಡೆ ಮಾಡ್ತಿರೋದು ಯಾರು ಗೊತ್ತಾ?

Rashmika Final
Published on

ಸಾಮಾನ್ಯವಾಗಿ ಹೀರೋಗಳ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ಕ್ರೇಜ್ ಇರುತ್ತದೆ. ಹುಟ್ಟುಹಬ್ಬದ ದಿನ ಎಲ್ಲಾ ಅಭಿಮಾನಿಗಳೂ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಕಾಮನ್ ಡಿಸ್‌ಪ್ಲೇ ಪಿಕ್ಚರ್ (ಸಿಡಿಪಿ)ಗಳನ್ನು ಹಾಕಿಕೊಂಡು, ತಮ್ಮ ಮೆಚ್ಚಿನ ಸ್ಟಾರ್‌ಗಳ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ವಾಡಿಕೆ. ಇಂಥದ್ದೊಂದು ಟ್ರೆಂಡ್ ಈಗಾಗಲೇ ಚಾಲ್ತಿಯಲ್ಲಿದ್ದು, ಹಲವು ಸ್ಟಾರ್ ಹೀರೋಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಅಭಿಮಾನಿಗಳು ಸಿಡಿಪಿಗಳನ್ನು ಹಾಕಿಕೊಂಡು ಆ ಮೂಲಕ ಸಂಭ್ರಮಾಚರಣೆ ಮಾಡುವುದುಂಟು.

ಇದೀಗ ರಶ್ಮಿಕಾ ಅಭಿಮಾನಿಗಳ ಸಂಘದವರು ಇದನ್ನು ಮುಂದುವರೆಸಿದ್ದಾರೆ. ನಾಳೆ (ಏಪ್ರಿಲ್ 5ರ ಭಾನುವಾರ) ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬದಂದು ಅವರ ಎಲ್ಲಾ ಅಭಿಮಾನಿಗಳು ಸಹ ಸಿಡಿಪಿ ಹಾಕಿಕೊಂಡು ತಮ್ಮ ಮೆಚ್ಚಿನ ನಟಿಗೆ ಹಾರೈಸಲಿ ಎಂದು ರಶ್ಮಿಕಾ ಕರ್ನಾಟಕ ಫ್ಯಾನ್ಸ್ ಕ್ಲಬ್‌ನ ಆಸೆ. ಅದೇ ಕಾರಣಕ್ಕೆ ಇಂದು ಸಂಜೆ ಸಿಡಿಪಿ ಬಿಡುಗಡೆ ಮಾಡಲಾಗುತ್ತಿದೆ.

ಈ ಸಿಡಿಪಿಯನ್ನು ದಕ್ಷಿಣ ಭಾರತದ ಮೂವರು ಜನ್ರಪಿಯ ನಿರ್ದೇಶಕ-ನಿರ್ಮಾಪಕರಿಂದ ಬಿಡುಗಡೆ ಮಾಡಿಸಲಾಗುತ್ತಿದೆ. ಕನ್ನಡದಿಂದ ‘ಪೈಲ್ವಾನ್’ ಕೃಷ್ಣ, ಇಂದು ಸಂಜೆ ಸಿಡಿಪಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ತೆಲುಗಿನಿಂದ ನಿರ್ದೇಶಕ ವೆಂಕಿ ಕುಡುಮುಲ ಮತ್ತು ತಮಿಳಿನಿಂದ ನಿರ್ಮಾಪಕ ಎಸ್.ಆರ್. ಪ್ರಭು ಬಿಡುಗಡೆ ಮಾಡುತ್ತಿದ್ದಾರೆ. ಈ ಮೂವರು ಸಂಜೆ ಆರಕ್ಕೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಸತತವಾಗಿ ಬಿಡುಗಡೆ ಮಾಡುತ್ತಿದ್ದಾರೆ.

ಇನ್ನು ಲಾಕ್‌ಡೌನ್‌ನಿಂದ ಸಂಭ್ರಮಾಚರಣೆಗಳೆಲ್ಲಾ ಬಂದ್ ಆಗಿರುವುದರಿಂದ, ರಶ್ಮಿಕಾ ನಾಳೆ ತಮ್ಮ ಮನೆಯಲ್ಲೇ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net