‘ಕೃಷ್ಣ ಟಾಕೀಸ್’: ಹೆದರಿಸಲು ಬಂದ್ರು ಅಜೇಯ್-ಅಪೂರ್ವ

NB 4 Ajay rao
Ajay rao
Published on

ಬೆಂಗಳೂರು: ಅಜೇಯ್ ರಾವ್ ಸಿನಿಮಾ ಕರಿಯರ್​ನಲ್ಲಿ ಲವರ್​ಬಾಯ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ‘ಕೃಷ್ಣ ಟಾಕೀಸ್’ ಟ್ರೇಲರ್ ಮೂಲಕ ಕೊಂಚ ಭಯವನ್ನು ಹೊತ್ತು ಆಗಮಿಸಿದ್ದಾರವರು. ಆ ಪ್ರಯತ್ನಕ್ಕೆ ಈಗಾಗಲೇ ಮೆಚ್ಚುಗೆಯೂ ವ್ಯಕ್ತವಾಗಿದೆ. ಇನ್ನೇನು ‘ಕೃಷ್ಣ ಟಾಕೀಸ್’ ಏ.19ರಂದು ಟಾಕೀಸ್​ಗೆ ಆಗಮಿಸಲು ತಯಾರಾಗುತ್ತಿದೆ.

ವಿಜಯಾನಂದ್ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಅಜೇಯ್ ರಾವ್ ಹಿಂದೆಂದೂ ಮಾಡದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ಇದು ನನ್ನ 26ನೇ ಸಿನಿಮಾ. ಇಲ್ಲಿಯವರೆಗೂ ನಾನು ಮಾಡದ ಶೈಲಿಯನ್ನು ಈ ಸಿನಿಮಾದಲ್ಲಿ ನೋಡಬಹುದು. ಸಸ್ಪೆನ್ಸ್, ಥ್ರಿಲ್ಲರ್ ಜತೆಗೆ ಹಾರರ್ ನಂಟಿದೆ. ಪತ್ರಕರ್ತನಾಗಿಯೂ ಕಾಣಿಸಿಕೊಂಡಿದ್ದೇನೆ’ ಎಂಬುದು ಅಜಯ್ ರಾವ್ ಮಾತು.

ಅಂದಹಾಗೆ, 2017ರಲ್ಲಿ ಲಖನೌನಲ್ಲಿನ ಚಿತ್ರಮಂದಿರದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ‘ಕೃಷ್ಣ ಟಾಕೀಸ್’ ಸಿನಿಮಾ ಮಾಡಲಾಗಿದೆ. ನೈಜ ಕಥೆಗೆ ಕಾಲ್ಪನಿಕ ಅಂಶಗಳನ್ನು ಮಿಶ್ರಣ ಮಾಡಿ ಹೆದರಿಸುವ ಪ್ರಯತ್ನ ನಿರ್ದೇಶಕರಿಂದ ಆಗಿದೆ. ಅಜಯ್ಗೆ ನಾಯಕಿಯಾಗಿ ಅಪೂರ್ವ ಜೋಡಿಯಾಗಿದ್ದು, ಅವರ ಪಾತ್ರವೂ ಅಷ್ಟೇ ವಿಶೇಷವಾಗಿದೆ. ‘ನಾನಿಲ್ಲಿ ರಮ್ಯಾ ಹೆಸರಿನ ಪಾತ್ರ ಮಾಡಿದ್ದೇನೆ. ಪಟ್ಟಣದ ಹುಡುಗಿ ಕಾಡಿನ ಸಂರಕ್ಷಣೆ ಬಗ್ಗೆ ಹಳ್ಳಿಗೆ ಬಂದು ಹೇಗೆ ಸಂಕಷ್ಟಕ್ಕೆ ಸಿಲುಕುತ್ತಾಳೆ. ಆಕೆಯ ಸಮಸ್ಯೆಗೆ ನಾಯಕ ಏನೆಲ್ಲ ರಿಸ್ಕ್ ತೆಗೆದುಕೊಳ್ಳುತ್ತಾನೆ ಎಂಬುದೇ ಸಿನಿಮಾ’ ಎನ್ನುತ್ತಾರೆ ಅಪೂರ್ವ.

ಗೋಕುಲ್ ಎಂಟರ್​ಟೈನ್​ವೆುಂಟ್ ಬ್ಯಾನರ್​ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಗೋವಿಂದ್ ರಾಜು ಆಲೂರ್ ಬಂಡವಾಳ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ಅಜಯ್ ಮತ್ತು ಚಿಕ್ಕಣ್ಣ ಒಟ್ಟಿಗೆ ನಟಿಸಿದ್ದಾರೆ. ಸಿಂಧೂ ಲೋಕನಾಥ್ ಪ್ರಮುಖ ಪಾತ್ರದಲ್ಲಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ವಿಕ್ರಂ ಸಾಹಸ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net