ಕೃಷ್ಣಾ ಈಗ ಹ್ಯಾಪಿ ಕಿಡ್

happy feb 2020
Published on

ಬೆಂಗಳೂರು: ‘ಸವರ್ಣ ದೀರ್ಘ ಸಂಧಿ’ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿ ಅಂಬೆಗಾಲಿಡುತ್ತಿದ್ದ ಕರಾವಳಿಯ ಬೆಡಗಿ ಕೃಷ್ಣಾ ಎರಡನೇ ಸಿನಿಮಾದಲ್ಲೇ ಹಾಲಿವುಡ್​ಗೆ ಹಾರಿದ್ದಾರೆ.

ಮಾತ್ರವಲ್ಲ, ಇದೀಗ ಸದ್ದಿಲ್ಲದೆ ತಮ್ಮ ಆ ಪ್ರಪ್ರಥಮ ಇಂಗ್ಲಿಷ್ ಸಿನಿಮಾ ‘ಕಿಡ್ ಹ್ಯಾಪಿ’ಯ ಶೂಟಿಂಗ್ ಮುಗಿಸಿದ ಸಂತೋಷದಲ್ಲಿದ್ದಾರೆ. ಇಂಡೋ-ಅಮೆರಿಕನ್ ಪ್ರತಿಭೆ ಕ್ರಿಸ್ ಚೆಪೈಕೋಡ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಕೃಷ್ಣಾ ಇದರಲ್ಲಿ ಹೀರೋಯಿನ್ ಆಗಿ ನಟಿಸಿದ್ದಾರೆ. ‘ಇಲ್ಲಿ ನನ್ನ ಪಾತ್ರದ ಹೆಸರು ಮಲ್ಲಿಕಾ. ಭಾರತದ ಒಂದು ವಿಭಿನ್ನ ಯುವತಿಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ.

ಇದು ನೈಜ ಘಟನಾವಳಿ ಆಧಾರಿತ ಸಿನಿಮಾ. ಇಲ್ಲಿ ಹೀರೋ ಅಮ್ಮ ಅಮೆರಿಕನ್, ಅಪ್ಪ ಇಂಡಿಯನ್. ಆತ ತನ್ನ ತಂದೆಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಾಗ ಮಲ್ಲಿಕಾಳ ಪರಿಚಯವಾಗುತ್ತದೆ. ಆ ನಂತರ ಏನೇನಾಗುತ್ತದೆ ಎಂಬುದೇ ಕಥಾಹಂದರ’ ಎನ್ನುತ್ತಾರೆ ಕೃಷ್ಣಾ. ಅಂದಹಾಗೆ ಇಲ್ಲಿನ ಕಥೆಗೂ ನಿರ್ದೇಶಕರ ಜೀವನಕ್ಕೂ ತಾಳೆಯಾಗುತ್ತದೆ.

ನಿಜಜೀವನದಲ್ಲಿ ಅವರೂ ಇಂಡೋ-ಅಮೆರಿಕನ್ ಪ್ರಜೆಯಾಗಿದ್ದು, ತಮ್ಮದೇ ಎಂಬಂತಿರುವ ಕಥೆಗೆ ಕಾಲ್ಪನಿಕ ಸ್ಪರ್ಶ ನೀಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ವಿಶೇಷ ಎಂದರೆ ಇಲ್ಲಿನ ಹೀರೋ ಕೂಡ ಇಂಡೋ-ಅಮೆರಿಕನ್ ಪ್ರಜೆ, ಅವರ ಹೆಸರು ನರೇನ್ ವೀಸ್. ಕ್ರಿಸ್ ನಟಿ ವಿನಯಾಪ್ರಸಾದ್ ಅವರ ಮೊದಲ ಪತಿ ವಿಆರ್​ಕೆ ಪ್ರಸಾದ್ ಅವರ ಶಿಷ್ಯ ಆಗಿದ್ದರಿಂದ ಕೃಷ್ಣಾಗೆ ಈ ಅವಕಾಶ ಸಿಕ್ಕಿದೆ. ‘ಕ್ರಿಸ್ ಅಂದಿನಿಂದಲೂ ತಮ್ಮ ಕುಟುಂಬದ ಜತೆ ಸಂಪರ್ಕದಲ್ಲಿ ಇದ್ದಿದ್ದರಿಂದ ಈ ಅವಕಾಶ ಸಿಕ್ಕಿತು. ಕಥೆ ಮಾಡುವಾಗಲೇ ಅವರು ನನ್ನನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಬರೆದಿದ್ದಾರೆ. ಈ ಪಾತ್ರಕ್ಕಾಗಿ ನಾನು ದೊಣ್ಣೆವರಸೆಯಂಥ ಆತ್ಮರಕ್ಷಣಾ ಕಲೆಯನ್ನೂ ಕಲಿತೆ. ಇದು ಮೂರು ವರ್ಷದ ಯೋಜನೆ, 3 ವಾರದಲ್ಲಿ ಶೂಟಿಂಗ್ ಮಾಡಲಾಗಿದೆ. ಬಹುತೇಕ ಆಗುಂಬೆಯಲ್ಲಿ ಶೂಟಿಂಗ್ ನಡೆದಿದ್ದು, ಒಂದಷ್ಟು ಚಿತ್ರೀಕರಣ ನ್ಯೂಯಾರ್ಕ್​ನಲ್ಲಿ ನಡೆದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಈ ವರ್ಷದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷ್ಣಾ. ಕ್ರಿಸ್ ಅವರ ಭಾವಿಪತ್ನಿ ಮೇಘನ್ ಸಿಬೊನಾ ಸಹ ನಿರ್ದೇಶಕಿಯಾಗಿ ಈ ಚಿತ್ರಕ್ಕೆ ಕೈಜೋಡಿಸಿದ್ದಾರೆ.

ಇದು ಮುಖ್ಯವಾಗಿ ಅಮೆರಿಕನ್ ಪ್ರೇಕ್ಷಕರಿಗಾಗಿ ಮಾಡಿರುವ ಸಿನಿಮಾ. ಭಾರತವೆಂದರೆ ಒಂದು ಬೇರೆಯದೇ ಕಲ್ಪನೆ ವಿದೇಶಿಗರಲ್ಲಿದೆ. ಅದನ್ನು ನಿವಾರಿಸಿ ಭಾರತದ ಬಗ್ಗೆ ಒಂದೊಳ್ಳೆಯ ಭಾವನೆ ಮೂಡುವಂತೆ ಮಾಡುವ ಪ್ರಯತ್ನವೇ ಈ ಸಿನಿಮಾ. | ಕೃಷ್ಣಾ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net