

ಬೆಂಗಳೂರು: ಕೃಷಿ ತಾಪಂಡ, ‘ಬ್ಲಾಂಕ್’ ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಆ ಚಿತ್ರ ಇದೀಗ ಮುಗಿದಿರುವುದಷ್ಟೇ ಅಲ್ಲ, ಇದೇ ಶುಕ್ರವಾರ (ಫೆ.25) ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಕೃಷಿ ಇದುವರೆಗೂ ಮಾಡದಿರುವಂತಹ ಒಂದು ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದಾಗಿ ಹೇಳುತ್ತಾರೆ.
‘ಮೂರು ಶೇಡ್ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಇದೊಂದು ಅದ್ಭುತ ಚಿತ್ರ ಎನ್ನುವುದಕ್ಕಿಂತ ಪ್ರಯೋಗಾತ್ಮಕ ಚಿತ್ರ ಎನ್ನುವುದು ಸರಿ. ನೋಡಿಸಿಕೊಂಡು ಹೋಗುವ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ’ ಎನ್ನುತ್ತಾರೆ ಕೃಷಿ. ಈ ಚಿತ್ರವನ್ನು ಜಯ್ ಎನ್ನುವವರು ನಿರ್ದೇಶಿಸಿದ್ದು, ಮೊದಲ ಸಲ ನೋಡಿದವರಿಗೆ ಚಿತ್ರ ಅರ್ಥವಾಗುವುದು ಕಷ್ಟ ಎಂದು ಮುಚ್ಚುಮರೆ ಇಲ್ಲದೆ ಹೇಳುತ್ತಾರೆ. ‘ನಾಲ್ಕು ಮುಖ್ಯ ಪಾತ್ರಗಳ ಸುತ್ತ ಚಿತ್ರ ಸುತ್ತುತ್ತದೆ. ಇದು ಕನಸು ಹಾಗೂ ವಾಸ್ತವತೆಯ ನಡುವಿನ ಪಯಣ. ಇದೊಂದು ‘ಲೂಸಿಯಾ’, ‘ಉಳಿದವರು ಕಂಡಂತೆ’ ರೀತಿಯ ಸಿನಿಮಾ ಎನ್ನಬಹುದು’ ಎನ್ನುತ್ತಾರೆ ಜಯ್.
ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಾಂತ್ ಸಿದ್ದಿಗೆ, ನಿರ್ದೇಶಕರು ಕಥೆ ಹೇಳಿದಾಗ ಏನೂ ಅರ್ಥವಾಗಲಿಲ್ಲವಂತೆ. ‘ಚಿತ್ರದ ನಾಲ್ಕು ಮುಖ್ಯ ಪಾತ್ರಗಳ ಜತೆಗೆ ನನ್ನ ಪಾತ್ರವಿದೆ’ ಎಂದರು ಸಿದ್ದಿ. ಈ ಚಿತ್ರವನ್ನು ಮಂಜುನಾಥ್ ಪ್ರಸನ್ನ ಎನ್ನುವವರು ನಿರ್ವಿುಸಿದ್ದಾರೆ. ಚಿತ್ರದಲ್ಲಿ ರಶ್ ಮಲ್ಲಿಕ್, ಪೂರ್ಣಚಂದ್ರ ಮೈಸೂರು, ಭರತ್ ಹಾಸನ್, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದು, ಶ್ರೀಶಾಸ್ತ ಸಂಗೀತ ಸಂಯೋಜಿಸಿದ್ದಾರೆ.