

ಬೆಂಗಳೂರು: ಕಳೆದ ಎರಡ್ಮೂರು ತಿಂಗಳಿಗೆ ಹೋಲಿಕೆ ಮಾಡಿದರೆ, ಇದೀಗ ಸಿನಿಮಾ ಕೆಲಸಗಳು ಚುರುಕು ಪಡೆದುಕೊಂಡಿವೆ. ಬಹುತೇಕ ಸಿನಿಮಾ ಕಲಾವಿದರೆಲ್ಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ನಟಿ ಕೃಷಿ ತಾಪಂಡ ಸಹ ಮತ್ತೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ. ಸದ್ದಿಲ್ಲದೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘5’! ಪಂಚಭೂತಗಳಾದ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶ ಇವೆಲ್ಲವನ್ನು ಆಧರಿಸಿ ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳು ಮೂಡಿಬಂದಿವೆ.
ಇದೀಗ ಆ ಐದು ಅಂಶಗಳನ್ನಿಟ್ಟುಕೊಂಡೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ವಿಕ್ರಂ ಮತ್ತು ಜಿಯಾ. ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನ ಶುರುವಾಗಿದ್ದ ಈ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿತ್ತು. ಇದೀಗ ಒಂದಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ಚಿತ್ರೀಕರಣ ಮಾಡಲಾಗುತ್ತಿದೆ. ಕ್ರೖೆಂ ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗುತ್ತಿರುವ ‘5’ ಸಿನಿಮಾದಲ್ಲಿ ಕಾಪ್ ಅವತಾರದಲ್ಲಿ ಕಿಶೋರ್ ನಟಿಸುತ್ತಿದ್ದು, ಅವರಿಗೆ ಕೃಷಿ ಜೋಡಿಯಾಗಿದ್ದಾರೆ. ‘ಲಾಕ್ಡೌನ್ಗೂ ಮುಂಚೆ ಶುರುವಾದ ಈ ಸಿನಿಮಾದಲ್ಲಿ ನಾಯಕಿ ಪಾತ್ರ ಇರಲಿಲ್ಲ. ನಿರ್ದೇಶಕರು ಇತ್ತೀಚೆಗೆ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿಕೊಂಡು ನಾಯಕಿಯ ಪಾತ್ರ ಸೇರಿಸಿದ್ದರು. ಒಂದೇ ಮಾತಿಗೆ ಕಥೆ ಒಪ್ಪಿಗೆ ಆಯಿತು. ಪತ್ರಕರ್ತೆ ಮತ್ತು ರಾಜಕಾರಣಿ ಎರಡೂ ಶೇಡ್ಗಳಿರುವ ಪಾತ್ರ ನನ್ನದಾಗಿದೆ. ಕಿಶೋರ್ಗೆ ಪತ್ನಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂಬುದು ಕೃಷಿ ಮಾತು. ಬೆಂಗಳೂರಿನಲ್ಲಿ 5 ದಿನದ ಶೂಟಿಂಗ್ ಮುಗಿಸಿರುವ ತಂಡ, ಸದ್ಯ ಮೈಸೂರಿನಲ್ಲಿ ಠಿಕಾಣಿ ಹೂಡಿದೆ. ಅದಾದ ಬಳಿಕ ಕೋಲಾರದಲ್ಲಿಯೂ ಕೆಲ ದಿನಗಳ ಚಿತ್ರೀಕರಣ ನಡೆಯಲಿದೆ. ಸೀಮಿತ ಕಲಾವಿದರನ್ನಷ್ಟೇ ಬಳಸಿಕೊಂಡು ಈ ಸಿನಿಮಾ ತಯಾರಾಗುತ್ತಿದ್ದು, ಒಂದೇ ಮನೆಯಲ್ಲಿಯೇ ಸಿನಿಮಾ ಸಾಗಲಿದೆಯಂತೆ. ಇನ್ನು ಕೃಷಿ ನಟನೆಯ ‘ಬ್ಲಾಂಕ್’, ‘ಲಂಕೆ’ ಮತ್ತು ‘ರೂಪಾಯಿ’ ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಬಿಡುಗಡೆಗೆ ಸಜ್ಜಾಗುತ್ತಿವೆ.