ಖುಷಿಯಲಿ ಕಾವ್ಯಾ ಶೈವ: ಮೊದಲ ಚಿತ್ರ ‘ಕೊತ್ತಲವಾಡಿ’ ಗೆಲುವಿನ ಸಂತಸದಲ್ಲಿ ನಟಿ

kavya shaiva 1
Published on

ಬೆಂಗಳೂರು: ‘ಗ್ಲಾಮರ್ ಅಥವಾ ಡಿ-ಗ್ಲಾಮರ್ ಎನ್ನುವುದಕ್ಕಿಂತ ಗಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಆಸೆಯಿದೆ. ಸದ್ಯ ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆ. ಆಗೊಮ್ಮೆ, ನನಗೆ ಮಹಿಳಾ ಪ್ರಧಾನ ಸಿನಿಮಾಕ್ಕೆ ಅವಕಾಶ ಸಿಕ್ಕರೆ, ಮೊದಲ ಆದ್ಯತೆ ಆ ಕಥೆಗೆ ನೀಡುತ್ತೇನೆ’. -ಇದು ‘ಕೊತ್ತಲವಾಡಿ’ ಬಳಿಕ ಭರವಸೆ ಮೂಡಿಸಿರುವ ನಟಿ ಕಾವ್ಯಾ ಶೈವ ಮಾತು.

ಕಳೆದ ಆ.1ರಂದು ತೆರೆಕಂಡ ‘ಕೊತ್ತಲವಾಡಿ’ ಚಿತ್ರದ ಮೂಲಕ ಕಾವ್ಯಾ ಶೈವ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಇಲ್ಲಿ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿದ್ದ ನಟಿಯ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಖುಷಿಯಲ್ಲಿರುವ ನಟಿ ಕಾವ್ಯಾ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು. ‘‘ಕೊತ್ತಲವಾಡಿ’ ಸಿನಿಮಾ ಹಾಗೂ ನನ್ನ ಪಾತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಂದೊಳ್ಳೆ ಚಿತ್ರದಲ್ಲಿ ನಟಿಸಿದ್ದೇನೆ ಎಂಬ ಖುಷಿಯಿದೆ. ಹಾಗೆಯೇ ಕಲಾವಿದರಾದ ಪೃಥ್ವಿ ಅಂಬಾರ್, ರಾಜೇಶ್ ನಟರಂಗ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಜತೆ ಕೆಲಸ ಮಾಡಿದ್ದು ದೊಡ್ಡ ಅನುಭವ ನೀಡಿದೆ. ಈ ಮೂವರಿಂದ ನಾನು ಕಲಿತಿದ್ದು ತುಂಬಾ ಇದೆ. ಮೊದಲಿಗೆ ಸ್ವಲ್ಪ ಭಯ ಇತ್ತು. ಬಳಿಕ ಅವರೇ ಒಂದು ಕಂರ್ಟ್ ಜೋನ್ ಸೃಷ್ಟಿಸಿದರು. ನನಗೆ ಬೆಂಬಲವಾಗಿ ನಿಂತರು. ಇದರಿಂದ ನಾನು ಈ ಚಿತ್ರದಲ್ಲಿ ಯಾವುದೇ ಭಯವಿಲ್ಲದೆ ಅಭಿನಯಿಸಲು ಕಾರಣವಾಯಿತು. ನಾನು ಕಿರುತೆರೆಯಿಂದ ಬಂದಿರುವ ಕಾರಣ, ಧಾರಾವಾಹಿಯಲ್ಲಿ ತುಂಬಾ ಭಾವತೀವ್ರವಾದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೆ. ಈ ಚಿತ್ರದಲ್ಲೂ ಕೂಡ ಪಾತ್ರ ಹಾಗೆಯೇ ಇತ್ತು. ಎಮೋಷನಲ್ ದೃಶ್ಯಗಳಲ್ಲಿ ಸರಾಗವಾಗಿ ಅಭಿನಯಿಸಲು ಕಾರಣವಾಯಿತು. ನನಗೆ ಸವಾಲು ಅನಿಸಿದ್ದು ತುಂಬಾ ಕಡಿಮೆ. ಇನ್ನು ನನ್ನ ಪಾತ್ರದ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ ರಾಕ್‌ಲೈನ್ ವೆಂಕಟೇಶ್ ಸರ್, ನಿಮ್ಮ ನಟನೆ ಮೊದಲ ಸಿನಿಮಾದಂತೆ ಅನಿಸುವುದಿಲ್ಲ ಎಂದಿರುವುದು ಖುಷಿ ನೀಡಿದೆ’ ಎನ್ನುತ್ತಾರೆ ಕಾವ್ಯಾ.

ಕಥೆ ಕೇಳುತ್ತಿದ್ದೇನೆ: ‘ಕೊತ್ತಲವಾಡಿ’ ಬಳಿಕ ಕಾವ್ಯಾ ಶೈವ, ಕನ್ನಡದ ಹಾಗೂ ತೆಲುಗಿನಲ್ಲಿ ಒಂದು ವೆಬ್ ಸಿರೀಸ್ ಕಥೆ ಕೇಳಿದ್ದಾರೆ. ಆದರೆ, ಸದ್ಯಕ್ಕೆ ಯಾವುದು ´ಫೈನಲ್ ಮಾಡಿಲ್ಲ. ‘ಕನ್ನಡ ಸೇರಿ ಪರಭಾಷೆಗಳಿಂದಲೂ ಕಥೆಗಳು ಬರುತ್ತಿವೆ. ಆದರೆ, ನಾನು ಸ್ವಲ್ಪ ಸೆಲೆಕ್ಟಿವ್. ಕಥೆ ಕೇಳಿದ ಬಳಿಕ ಸ್ವಲ್ಪ ಯೋಚಿಸುತ್ತಿದ್ದೇನೆ’ ಎಂದು ಕಾವ್ಯಾ ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net