ರಗಡ್ ‘ಕೊತ್ತಲವಾಡಿ’: ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ನಿರ್ಮಾಣದ ಚಿತ್ರದ ಟೀಸರ್ ಬಿಡುಗಡೆ

kottalawadi
Published on

ಬೆಂಗಳೂರು: ಸಿನಿಮಾ ನಟರ ಕುಟುಂಬದವರು ನಿರ್ಮಾಪಕರಾಗುವ ಮೂಲಕ ಚಿತ್ರರಂಗ ಪ್ರವೇಶಿಸುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಶಿವರಾಜಕುಮಾರ್ ಪುತ್ರಿ ನಿವೇದಿತಾ, ‘ಫೈರ್‌ಪ್ಲೈ’ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ, ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಕೂಡ ‘ಕೊತ್ತಲವಾಡಿ’ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಶ್ರೀರಾಜ್ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ, ಪೃಥ್ವಿ ಅಂಬಾರ್, ಕಾವ್ಯಾ ಮುಖ್ಯಭೂಮಿಕೆಯಲ್ಲಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಕಲಾ ಬಳಗದಲ್ಲಿದ್ದಾರೆ. ಇತ್ತೀಚೆಗೆ ನಟ ಶರಣ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕಿ ಪುಷ್ಪಾ, ‘ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು. ಯಶ್ ಮನೆಯ ಸಿನಿಮಾ ಅಂದರೆ, ಇಡೀ ದೇಶ ನೋಡುತ್ತದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಿ, ಇಲ್ಲವಾದರೆ ಬೇಡ ಎಂದಿದ್ದೆ. ಹಾಗಾಗಿ, ಅದಕ್ಕೆ ಬೇಕಾದ ಅಗತ್ಯ ಬೆಂಬಲ ನೀಡಿದ್ದೇವೆ. ಸಿನಿಮಾ ಏನು ಕೇಳುತ್ತದೆಯೋ, ಅದನ್ನೇ ನಾವು ನೀಡಬೇಕು ಎಂಬುದು ಯಶ್‌ನಿಂದ ನಾವು ಕಲಿತಿದ್ದೇವೆ. 10 ರೂ. ಜಾಸ್ತಿಯಾದರೂ ಕ್ವಾಲಿಟಿ ಕೊಡಬೇಕು. ಅದೇ ರೀತಿ ನೀವು ಮಾಡುತ್ತೇವೆ ಎಂದರೆ ಮಾತ್ರ ನಿಮಗೆ ಸಿನಿಮಾ ಮಾಡುತ್ತೇವೆ ಎಂದಿದ್ದೆ. ಹಾಗಾಗಿ, ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಕಾತುರಳಾಗಿದ್ದೇನೆ’ ಎಂದು ಹೇಳಿದರು. ಶ್ರೀರಾಜ್, ‘ಅಮ್ಮ ಚೆನ್ನಾಗಿ ಕಥೆ ಜಡ್ಟ್ ಮಾಡುತ್ತಾರೆ. ಕೊತ್ತಲವಾಡಿ ಒನ್ ಲೈನ್ ಹೇಳಿದೆ, ಅವರಿಗೆ ಇಷ್ಟವಾಯ್ತು. ಅದಕ್ಕೆ ಓಂಕಾರ ಹಾಕಿದರು’ ಎಂದು ನೆನಪಿಸಿಕೊಂಡರು. ಉಳಿದಂತೆ ವಿಕಾಸ್ ವಸಿಷ್ಠ ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ, ಕಾರ್ತಿಕ್ ಎಸ್. ಛಾಯಾಗ್ರಹಣ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net