

ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಶೂಟಿಂಗ್ ಮುಗಿದು ಹಲವು ದಿನಗಳೇ ಆಗಿವೆ. ಈ ಮಧ್ಯೆ, ಚಿತ್ರದ ಟ್ರೇಲರ್ ಯಾವಾಗ, ಹಾಡುಗಳ ಬಿಡುಗಡೆ ಯಾವಾಗ ಎಂದು ಕಿಚ್ಚನ ಫ್ಯಾನ್ಸ್ ಕೇಳುತ್ತಲೇ ಇದ್ದರು. ಆ ಎಲ್ಲಾ ಅಭಿಮಾನಿಗಳಿಗೆ ಚಿತ್ರತಂಡ ಒಂದು ಗುಡ್ ನ್ಯೂಸ್ ಕೊಟ್ಟಿದೆ.
ಏಪ್ರಿಲ್ 27ರ ಸೋಮವಾರದಂದು ಬೆಳಿಗ್ಗೆ 10 ಗಂಟೆ 1 ನಿಮಿಷಕ್ಕೆ ‘ಕೋಟಿಗೊಬ್ಬ 3’ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಆನಂದ್ ಆಡಿಯೋದ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ‘ಆಕಾಶವೇ ಆರಾಧಿಸುವ ...’ ಎಂಬ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದ್ದು, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದರೆ, ‘ಮ್ಯಾಜಿಕಲ್ ಕಂಪೋಸರ್’ ಎಂದನಿಸಿಕೊಂಡಿರುವ ಅರ್ಜುನ್ ಜನ್ಯ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಈ ಹಾಡನ್ನು ಹಾಡಿರುವುದು ವ್ಯಾಸರಾಜ್. ಹಾಡು ಬಿಡುಗಡೆಯಾಗುತ್ತಿರುವ ವಿಷಯವನ್ನು ಸ್ವತಃ ಸುದೀಪ್, ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ‘ಕೋಟಿಗೊಬ್ಬ 3’ ಚಿತ್ರವನ್ನು ‘ಸೂರಪ್ಪ’ ಬಾಬು ನಿರ್ಮಿಸಿದ್ದು, ಶಿವಕಾರ್ತಿಕ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ಸುದೀಪ್ ಜತೆಗೆ ಮೋನಿಕಾ ಸೆಬಾಸ್ಟಿಯನ್, ಅ್ತಾಬ್ ಶಿವದಾಸಾನಿ, ರವಿಶಂಕರ್ ಮುಂತಾದವರು ಈ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮೇನಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಕ್ಕೆ ತಯಾರಿ ಮಾಡಿಕೊಂಡಿತ್ತು ಚಿತ್ರತಂಡ. ಕರೋನಾ ಮತ್ತು ಲಾಕ್‌ಡೌನ್‌ನಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮಧ್ಯೆ ಅಭಿಮಾನಿಗಳ ಖುಷಿಗಾಗಿ ಸೋಮವಾರ ‘ಆಕಾಶವೇ ಆರಾಧಿಸುವ ...’ ಹಾಡು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ.