

ಬೆಂಗಳೂರು: ನಿಗದಿತ ದಿನಾಂಕದ ಬದಲು ಒಂದು ದಿನ ತಡವಾಗಿ ಬಿಡುಗಡೆಯಾದ ‘ಕೋಟಿಗೊಬ್ಬ 3’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬಿಸುತ್ತಿದೆ. ಗುರುವಾರ ತೆರೆಕಾಣಬೇಕಿದ್ದ ಚಿತ್ರ ತಾಂತ್ರಿಕ ಸಮಸ್ಯೆಯಿಂದ ಶುಕ್ರವಾರ ಬಿಡುಗಡೆಯಾಗಿ, ಮೊದಲ ದಿನವೇ 12.5 ಕೋಟಿ ರೂ ಗಳಿಕೆ ಮಾಡಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ನೂತನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಖಚಿತಪಡಿಸಿದೆ.
ಇದು ಶುಕ್ರವಾರದ ಗಳಿಕೆ ಆದರೆ, ಶನಿವಾರ ಮತ್ತು ಭಾನುವಾರವೂ ವಾರಾಂತ್ಯವಾದ ಹಿನ್ನೆಲೆಯಲ್ಲಿ ಆ ಎರಡು ದಿನಗಳಲ್ಲಿ 25 ಕೋಟಿ ರೂ. ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಮೂರು ದಿನಗಳನ್ನು ಲೆಕ್ಕಹಾಕಿದರೆ, ಕೋಟಿಗೊಬ್ಬ 40 ಕೋಟಿ ರೂ. ಸನಿಹದಲ್ಲಿದ್ದಾನೆ. ವಾರಾಂತ್ಯದ ಗಳಿಕೆಯ ಲೆಕ್ಕವನ್ನು ಇನ್ನಷ್ಟೇ ಚಿತ್ರತಂಡ ಘೋಷಿಸಬೇಕಿದೆ. ಶಿವ ಕಾರ್ತಿಕ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ವಿುಸಿದ್ದಾರೆ. ಸತ್ಯ, ಶಿವ ಮತ್ತು ಘೋಸ್ಟ್ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ರಾಜ್ಯಾದ್ಯಂತ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಹೌಸ್ಫುಲ್ ಪ್ರದರ್ಶನ ಮುಂದುವರಿಸಿದೆ.