

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸುಧೀರ್ ಅತ್ತಾವರ್ ನಿರ್ದೇಶನದ ಸಿನಿಮಾ "ಕೊರಗಜ್ಜ'. ಚಿತ್ರೀಕರಣದ ಆರಂಭದಿಂದಲೂ ಹಲವು ಸವಾಲುಗಳ ಜತೆ ಪವಾಡಗಳನ್ನೂ ಎದುರಿಸುತ್ತಿದೆ. ಈಗ ಮತ್ತೊಂದು ಅಂತಹದೇ ಟನೆಗೆ ಚಿತ್ರತಂಡ ಸಾಯಾಗಿದೆ. ಇತ್ತೀಚೆಗಷ್ಟೆ ದೈವ ನರ್ತನದ ದೃಶ್ಯವನ್ನು ಬೆಂಗಳೂರಿನ ಹೊರ ವಲಯದ ಕಗ್ಗಲಿ ಹಳ್ಳಿಯಲ್ಲಿ ಅದ್ದೂರಿ ಸೆಟ್ ಹಾಕಿ ಕೇರಳದ ತೆಯ್ಯಂ ಕಲಾವಿದರ ಜತೆ ಹಾಗೂ ಮಾಸ್ ಮಾದ ಸಾಹಸ ನಿರ್ದೇಶನದಲ್ಲಿ ಮೂರನೇ ಬಾರಿ ಮರು ಚಿತ್ರೀಕರಣ ಮಾಡಲಾಗುತ್ತಿತ್ತು.
ಮಲಯಾಳಂನ ಮನೋಜ್ ಪಿಳ್ಳೈ ಛಾಯಾಗ್ರಾಹಣ ಮಾಡುತ್ತಿರುವಾಗ, ನಿರ್ದೇಶಕ ಸುಧೀರ್ ಅತ್ತಾವರ್ ಸನ್ನಿವೇಶ ವಿವರಿಸುತ್ತಿರುವಾಗ ಇದ್ದಕ್ಕಿದ್ದಂತೆ ಅಗೋಚರ ಶಕ್ತಿಯೊಂದು ತಳ್ಳಿ ಹಾಕಿದ್ದು, ಏಳೆಂಟು ಗಜ ದೂರ ಬಿದ್ದಿದ್ದಾರೆ. ಆದರೆ, ಅದೃಷ್ಟವಷಾತ್ ಯಾವುದೇ ಅಪಾಯ ಆಗಿಲ್ಲ. "ಕೊರಗಜ್ಜ' ಕೃಪೆಯಿಂದಲೇ ಏನೂ ಅಪಾಯ ಆಗಿಲ್ಲ ಎನ್ನುವುದು ಚಿತ್ರತಂಡದವರ ಮಾತು. ನಟಿ ಶ್ರುತಿ ಸೇರಿ ಹಲವು ಕಲಾವಿದರು ಹಾಗೂ ತಂತ್ರಜ್ಞರು ಈ ಟನೆಗೆ ಸಾಕ್ಷಿಯಾಗಿದ್ದಾರೆ. ಸದ್ಯ ಕೊಚ್ಚಿ ಹಾಗೂ ಮುಂಬೈನಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಚಿತ್ರ ಇದಾಗಿದ್ದು, ಬಿಗ್ ಬಜೆಟ್ನಲ್ಲಿ ತ್ರಿವಿಕ್ರಮ ಸಾಫಲ್ಯ ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರಕ್ಕೆ "ಪುಷ್ಪ', "ಆ್ಯಂಟ್ ಮ್ಯಾನ್', "ಟ್ರೂ ಸ್ಪಿರಿಟ್', "ಆಕ್ವಮ್ಯಾನ್' ಸೇರಿ ಹಲವು ಹಾಲಿವುಡ್ ಚಿತ್ರಗಳ ತಂತ್ರಜ್ಞರು ಭಾಗಿಯಾಗಿರುವುದು ವಿಶೇಷ. ಹಲವು ಬಾಲಿವುಡ್ ಹಾಗೂ ಹಾಲಿವುಡ್ ಚಿತ್ರಗಳಲ್ಲಿ ನಟಿಸಿರುವ ನಟ ಕಬೀರ್ ಬೇಡಿ, ಹೆಸರಾಂತ ನೃತ್ಯ ಸಂಯೋಜಕ ಸಂದೀಪ್ ಸೋಪರ್ಕರ್, ಶ್ರುತಿ, ಗಣೇಶ್ ಆಚಾರ್ಯ, ಭವ್ಯ ತಾರಾಗಣದಲ್ಲಿದ್ದಾರೆ. "ಕೊರಗಜ್ಜ'ನ ತಾಯಿ "ಕೊರೊಪೊಳು' ಪಾತ್ರದ ಮೂಲಕ ಋತಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.