ಯುಗಾದಿಗೆ ‘ಕೊರಗಜ್ಜ’ ದರ್ಶನ : ಚಿತ್ರದ ಹಾಡುಗಳಿಗೆ ಧ್ವನಿಯಾದ ಶ್ರೇಯಾ ಘೋಷಾಲ್

kabir bedi
Published on

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಗೀತ ರಚನಕಾರರಾಗಿ ಗುರುತಿಸಿಕೊಂಡಿದ್ದ ಸುಧೀರ್ ಅತ್ತಾವರ ನಿರ್ದೇಶನದ ನಾಲ್ಕನೇ ಸಿನಿಮಾ ‘ಕೊರಗಜ್ಜ’. ಕರಾವಳಿಯ ಐತಿಹಾಸಿಕ ಪುರುಷ ಕೊರಗಜ್ಜನ ಜೀವನಾಧಾರಿತ ಸಿನಿಮಾ ಇದಾಗಿದೆ. ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ ಹಾಗೂ ಕನ್ನಡದ ಶ್ರುತಿ, ಭವ್ಯಾ, ಶುಭ ಪೂಂಜಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರೀಕರಣ ಪೂರ್ಣಗೊಳಿಸಿರುವ ತಂಡವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಶುರುಮಾಡಿಕೊಂಡಿದೆ. ಇತ್ತೀಚೆಗೆ ಹಾಡುಗಳ ರೆಕಾರ್ಡಿಂಗ್ ನಡೆದಿದ್ದು, ಗಾಯಕರಾದ ಶ್ರೇಯಾ ಘೋಷಾಲ್, ಸೋನು ನಿಗಮ್, ಶಂಕರ್ ಮಹಾದೇವನ್, ಸುನಿಧಿ ಚವ್ಹಾಣ್, ಜಾವೇದ್ ಅಲಿ ಸೇರಿ ಹಲವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಬಗ್ಗೆ ಸುಧೀರ್ ಅತ್ತಾವರ, ‘‘ಕೊರಗಜ್ಜ’ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿದ್ದು, ಎಲ್ಲವನ್ನೂ ನಾನೇ ರಚಿಸಿರುವೆ. ಅದರಲ್ಲಿ ಗಾಯಕಿ ಶ್ರೇಯಾ ಘೋಷಾಲ್ ‘ಗಾಳಿಗಂಧ’ ಸೇರಿ ಇನ್ನೊಂದು ಹಾಡನ್ನು ಹಾಡಿದ್ದಾರೆ. ‘ತೌಳವ ದೇಶೇ...’ ಎನ್ನುವ ಏಳು ನಿಮಿಷಗಳ ಸಂಸ್ಕೃತದ ಹಾಡು ಶಂಕರ್ ಮಹಾದೇವನ್ ಧ್ವನಿಯಲ್ಲಿ ಮೂಡಿಬರಲಿದೆ. ಇನ್ನು ಉಳಿದಂತೆ, ‘ಪೋರ್ಕುಳಿ ಪೆರತದಲಿ’ ಎಂಬ ಹಾಡಿಗೆ ಗಾಯಕ ಸುನಿಧಿ ಚವ್ಹಾಣ್ ಧ್ವನಿಯಾಗಿದ್ದಾರೆ. ಸೋನು ನಿಗಮ್, ಜಾವೇದ್ ಅಲಿ, ಸ್ವರೂಪ್ ಖಾನ್, ಶರೋನ್ ಪ್ರಭಾಕರ್ ಸೇರಿ ಕನ್ನಡದ ರಮೇಶ್ ಚಂದ್ರ, ಪ್ರತಿಮಾ ಭಟ್ ಸೇರಿ ಹಲವರು ಧ್ವನಿಯಾಗಿದ್ದು, ಗೋಪಿ ಸುಂದರ್ ಚಿತ್ರಕ್ಕೆ ಸಂಗೀತ ಇರಲಿದೆ. ನಟ ಕಬೀರ್ ಬೇಡಿ ಕನ್ನಡ ಹಾಗೂ ಹಿಂದಿಗೆ ಡಬ್ಬಿಂಗ್ ಮಾಡಿದ್ದು, ಬೇರೆ ಭಾಷೆಗಳಿಗೆ ಬೇರೆ ಕಲಾವಿದರು ಡಬ್ ಮಾಡಿದ್ದಾರೆ ಎಂದು ಮಾಹಿತಿ ನೀಡುತ್ತಾರೆ. ಚಿತ್ರಕ್ಕೆ ಲವನ್- ಕುಶನ್ ಗ್ರಾಫಿಕ್ಸ್, ಜಿತು ಜೋಶ್, ವಿದ್ಯಾಧರ ಶೆಟ್ಟಿ ಸಂಕಲನ ಇರಲಿದೆ.

ಆರು ಭಾಷೆಯಲ್ಲಿ ಸಿನಿಮಾ ರಿಲೀಸ್: ಚಿತ್ರೀಕರಣ ಪೂರ್ಣಗೊಳಿಸಿರುವ ತಂಡವು ಯುಗಾದಿಗೆ ಸಿನಿಮಾ ರಿಲೀಸ್‌ಗೆ ಯೋಚಿಸುತ್ತಿದೆ. ಈ ಬಗ್ಗೆ ಸುಧೀರ್ ಅತ್ತಾವರ, ‘ಎಷ್ಟು ಜನಕ್ಕೆ ಕೊರಗಜ್ಜನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ನಾವು ಸಂಪೂರ್ಣ ಅಧ್ಯಯನ ಮಾಡಿ, ಈ ಸಿನಿಮಾದ ಮೂಲಕ ತಿಳಿಸಲು ಮುಂದಾಗುತ್ತಿದ್ದೇವೆ. ಕೇರಳ ಗಡಿಭಾಗದ ನೇತ್ರಾವತಿ ದಡದಿಂದ ಕಥೆ ಆರಂಭವಾಗುತ್ತದೆ. ಕೊಚ್ಚಿ, ಅತ್ತಿರಪಳ್ಳಿ, ಗಗನಚುಕ್ಕಿ, ಬೆಂಗಳೂರಿನ ಕಗ್ಗಲೀಪುರ, ಬೆಳ್ತಂಗಡಿ ಸೇರಿ ಅನೇಕ ಕಡೆ ಶೂಟಿಂಗ್ ಮಾಡಲಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ತುಳು ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಮುಂದಿನ ತಿಂಗಳು ಟ್ರೇಲರ್, ಆಡಿಯೋ, ಫಸ್ಟ್‌ಲುಕ್ ಬಿಡುಗಡೆಗೊಳಿಸುತ್ತೇವೆ. ಅಂದುಕೊಂಡಂತಾದರೆ, ಯುಗಾದಿಗೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇದೆ ’ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net