

ಬೆಂಗಳೂರು: ‘ಬಿಗ್‌ಬಾಸ್ ಕನ್ನಡ ಸೀಸನ್ 10’ರ ಬಳಿಕ ನಟಿ ತನಿಷಾ ಕುಪ್ಪಂಡ ಸಿನಿ ಕೆರಿಯರ್‌ನಲ್ಲಿ ಮಂದಹಾಸ ಮೂಡಿದೆ. ಅವರ ನಟನೆಯ ‘ಪೆನ್‌ಡ್ರೈವ್’ ಇತ್ತೀಚೆಗೆ ತೆರೆಕಂಡಿತ್ತು. ಅದರ ಬಳಿಕ ಇದೀಗ ಮತ್ತೊಂದು ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ‘8ಎಂಎಂ’ ಖ್ಯಾತಿಯ ಹರಿಕೃಷ್ಣ ಎಸ್. ನಿರ್ದೇಶನದ, ಕೋಮಲ್‌ಕುಮಾರ್ ಅಭಿನಯಿಸಿರುವ ಡಾರ್ಕ್ ಕಾಮಿಡಿ ‘ಕೋಣ’ ಇದೇ 31ರಂದು ರಿಲೀಸ್ ಆಗುತ್ತಿದೆ. ಇಲ್ಲಿ ಕೋಮಲ್‌ಗೆ ನಟಿ ತನಿಷಾ ಕುಪ್ಪಂಡ ಜೋಡಿಯಾಗಿದ್ದಾರೆ. ಇನ್ನು ಈ ಚಿತ್ರದ ಮೂಲಕ ತನಿಷಾ ಹೊಸ ಸಾಹಸಕ್ಕಿಳಿದಿದ್ದು, ನಟನೆಯ ಜತೆಗೆ ನಿರ್ಮಾಣಕ್ಕಿಳಿದಿದ್ದಾರೆ. ‘ಮೊದಲು ಈ ಸಿನಿಮಾದ ಕಥೆ ಕೇಳಿದಾಗ ನಾನು ನಿರ್ಮಾಣ ಮಾಡುವುದು ಅಂತಾಗಿರಲಿಲ್ಲ. ಚಿತ್ರಕ್ಕೆ ಕೋಮಲ್ ಆಯ್ಕೆಯಾಗಿ ಅವರ ಒಂದು ಟೀಸರ್ ರಿಲೀಸ್ ಮಾಡಿದೆವು. ಅದಕ್ಕೆ ಭರಪೂರ ಪ್ರತಿಕ್ರಿಯೆಗಳು ಬಂದವು. ಆಗ, ನಾವೇ ನಿರ್ಮಾಣ ಮಾಡಿದರೆ ಚೆನ್ನಾಗಿರುತ್ತದೆ ಎಂದು ನಿರ್ಮಾಪಕಿಯಾದೆ. ಸುಮಾರು ಎರಡು ತಿಂಗಳ ಜರ್ನಿ ಅದ್ಭುತವಾದುದು. ನನಗೆ ‘ಬಿಗ್‌ಬಾಸ್’ ಗೆಳೆಯರು ನೆರವಾದರು. ಈ ಚಿತ್ರಕ್ಕೆ ಅವರು ಸಮಯ ನೀಡಿದ ಕಾರಣ ಶೂಟಿಂಗ್ ಮುಗಿಯಲು ಕಾರಣರಾದರು. ಮುಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಹಾಗೂ ಉದಯೋನ್ಮುಖ ತಾರೆಯರಿಗೆ ಸ್ಫೂರ್ತಿಯಾಗಲೆಂದೇ ನಾನು ನಿರ್ಮಾಣಕ್ಕಿಳಿದೆ’ ಎಂದು ಹೊಸ ಸಾಹಸದ ಬಗ್ಗೆ ಹಂಚಿಕೊಂಡರು.
ತನಿಷಾ ಕುಪ್ಪಂಡ ‘ಕೋಣ’ ಚಿತ್ರದ ನಿರ್ಮಾಪಕಿಯಾಗುವ ಜತೆಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ‘ಬಿಗ್‌ಬಾಸ್’ ಮುನ್ನ ಅಥವಾ ಬಳಿಕ ನನ್ನನ್ನು ಕೆಲವೇ ಪಾತ್ರಗಳಿಗೆ ಸೀಮಿತಗೊಳಿಸಲಾಗಿತ್ತು. ಅದನ್ನು ‘ಕೋಣ’ ಚಿತ್ರದ ಪಾತ್ರ ಬ್ರೇಕ್ ಮಾಡುತ್ತದೆ. ಲಕ್ಷ್ಮೀ ಎಂಬ ಪಾತ್ರದಲ್ಲಿದ್ದು, ಕೋಮಲ್ ಪತ್ನಿಯಾಗಿ ನಟಿಸಿದ್ದೇನೆ. ಲಕ್ಷ್ಮೀ ಎಂಬ ಹೆಸರೇ ಸಾಕು ಸಂಪ್ರದಾಯಸ್ಥೆ, ಮನೆ ಹುಡುಗಿ ಎಂಬ ಭಾವ ಮೂಡುತ್ತದೆ. ಹಾಗೆಯೇ, ಇದು ಮುದ್ದಾದ ಹಾಗೂ ಕನೆಕ್ಟ್ ಆಗುವ ಪಾತ್ರ. ಇನ್ನು ಈ ಚಿತ್ರದಲ್ಲಿ ಕೋಣ ಕೂಡ ಪಾತ್ರವಾಗಿದೆ. ಅದರ ಸುತ್ತವೇ ಕಥೆ ಸುತ್ತುತ್ತದೆ. ಇದೊಂದು ಸ್ವತಂತ್ರ ಕಥೆ. ನಗಿಸುತ್ತದೆ, ಹೆದರಿಸುತ್ತದೆ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಬಹುತೇಕ ‘ಬಿಗ್‌ಬಾಸ್’ ಸ್ಫರ್ಧಿಗಳು ಇರುವುದರಿಂದ ಇದೊಂದು ಮಿನಿ ಬಿಗ್‌ಬಾಸ್ ತರ ಕಾಣಿಸಬಹುದು’ ಎಂದು ತನಿಷಾ ನಗಾಡುತ್ತಾರೆ. ಸದ್ಯಕ್ಕೆ ‘ಕೋಣ’ ಕಾರಣಕ್ಕಾಗಿಯೇ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲವಾದರೂ, ಎರಡು-ಮೂರು ಕಥೆ ಕೇಳಿದ್ದು, ಮುಂದಿನ ದಿನಗಳಲ್ಲಿ ಅಪ್‌ಡೇಟ್ ನೀಡಲಿದ್ದಾರೆ.