ತನ್ನ ಚಿತ್ರ ಬಿಡಿಸಿದ ಶಿಕ್ಷಕನನ್ನು ಖುದ್ದಾಗಿ ಭೇಟಿಯಾಗಿ ಸರ್ಪ್ರೈಸ್​ ಗಿಫ್ಟ್​ ಕೊಟ್ಟ ನಟ ರಾಘವ ಲಾರೆನ್ಸ್!​

Raghava Lawrence
Published on

ಚೆನ್ನೈ: ಕಾಂಚನ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ರಾಘವ ಲಾರೆನ್ಸ್​ ಬಗ್ಗೆ ಯಾರಿಗೂ ಹೆಚ್ಚಿಗೆ ಪರಿಚಯಿಸುವ ಅಗತ್ಯವಿಲ್ಲ. ಎಲ್ಲ ಭಾಷಿಕರಿಗೂ ಲಾರೆನ್ಸ್​ ಮುಖ ಪರಿಚಯವಿದೆ. ಸಿನಿಮಾದ ಆರಂಭದ ದಿನಗಳಲ್ಲಿ ತನ್ನ ಡಾನ್ಸ್​ನಿಂದಲೇ ಎಲ್ಲರ ಗಮನ ಸೆಳೆದ ಅವರು ಲಾರೆನ್ಸ್​ ಮಾಸ್ಟರ್​ ಎಂದೇ ಖ್ಯಾತಿ ಗಳಿಸಿದರು. ಇದೀಗ ನಟನಾಗಿ, ನಿರ್ದೇಶಕನಾಗಿಯೂ ಎಲ್ಲೆಡೆ ತಮ್ಮ ಛಾಪೂ ಮೂಡಿಸುತ್ತಿದ್ದಾರೆ.

ಅಂದಹಾಗೆ ಲಾರೆನ್ಸ್​ ಸಿನಿಮಾದಲ್ಲಿ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾಕಷ್ಟು ಬಡವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಿದ್ದಾರೆ. ಬಡ ರೋಗಿಗಳ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ. ತಮ್ಮ ಸೇವಾ ಮನೋಭಾವದಿಂದಲೇ ಲಾರೆನ್ಸ್​ ಒಳ್ಳೆಯ ಹೆಸರು ಮಾಡಿದ್ದಾರೆ. ಲಾರೆನ್ಸ್​ ಅವರಿಂದ ಸ್ಪೂರ್ತಿ ಪಡೆದು ಎಲ್ಲರಿಗೂ ಸಹಾಯ ಮಾಡುತ್ತಿರುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಇದೀಗ ಲಾರೆನ್ಸ್‌ಗೆ ಸಂಬಂಧಿಸಿದ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಲಾರೆನ್ಸ್ ಬಗ್ಗೆ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಏನಿದೆ ಅಂದರೆ, ಸ್ವತಃ ಲಾರೆನ್ಸ್​ ಅವರೇ ಡ್ರಾಯಿಂಗ್ ಟೀಚರ್​ನನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ಲಾರೆನ್ಸ್​, ನಮಸ್ಕಾರ ಸ್ನೇಹಿತರೇ ಮತ್ತು ಅಭಿಮಾನಿಗಳೇ, ಇವರ ಹೆಸರು ಸೆಲ್ವಂ. ಇವರು ಕಲ್ಲಕುರಿಚಿ ಜಿಲ್ಲೆಯ ಮಣಲೂರುಪೇಟೆ ಚಿತ್ರಕಲಾ ಶಿಕ್ಷಕ. ಅವರ ಅದ್ಭುತವಾದ ಚಿತ್ರಕಲೆ ಕೌಶಲ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ನೀವೆಲ್ಲರೂ ಹಂಚಿಕೊಂಡಿರುವುದನ್ನು ನಾನು ನೋಡಿದೆ. ನಾನು ಅವರನ್ನು ಖುದ್ದಾಗಿ ಭೇಟಿಯಾಗಿ ಅವರ ಪ್ರತಿಭೆಯನ್ನು ಪ್ರಶಂಸಿಸಲು ಬಯಸುತ್ತೇನೆ. ಇಂದು, ನಾನು ಅವರನ್ನು ಭೇಟಿಯಾಗಿ, ಅವರ ಉಡುಗೊರೆಯನ್ನು ಸ್ಪರ್ಶಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಲಾರೆನ್ಸ್​, ಡ್ರಾಯಿಂಗ್​ ಟೀಚರ್​ಗೆ ಹಣ ಸಹಾಯ ಸಹ ಮಾಡಿದ್ದಾರೆ. ಇಲ್ಲಿಯವರೆಗೆ, ಲಾರೆನ್ಸ್ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಲಾರೆನ್ಸ್ ಅವರು ಯಾವುದೇ ಹಿನ್ನೆಲೆ ಅಥವಾ ಬೆಂಬಲವಿಲ್ಲದೆ ಚಿತ್ರರಂಗಕ್ಕೆ ಪ್ರವೇಶಿಸಿ, ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಆದರೆ, ಎಂದೂ ತಮ್ಮ ಮೂಲವನ್ನು ಮರೆತಿಲ್ಲ. ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಎಷ್ಟೋ ಜನರಿಗೆ ಮಾದರಿಯಾಗಿ ನಿಂತಿದ್ದಾರೆ. ಇವರು ತಮ್ಮ ಪ್ರತಿಷ್ಠಾನದ ಮೂಲಕ ಅನೇಕ ಬಡವರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಕುಟುಂಬಗಳಿಗೆ ಕೃಷಿ ಟ್ರ್ಯಾಕ್ಟರ್, ದ್ವಿಚಕ್ರ ವಾಹನಗಳನ್ನೂ ನೀಡಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಲಾರೆನ್ಸ್ ಅವರು ಲೆಕ್ಕವಿಲ್ಲದಷ್ಟು ಸಾಮಾಜಿಕ ಸೇವಾ ಕಾರ್ಯ ಮಾಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಲಾರೆನ್ಸ್ ಅವರು ಸದ್ಯ ವಿಜಯ್ ದಳಪತಿ ಅಭಿನಯದ ಗ್ರೇಟೆಸ್ಟ್​ ಆಫ್​ ಆಲ್​ ಟೈಮ್​ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಲೋಕೇಶ್​ ಕನಗರಾಜ್​ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net