

ಮುಂಬೈ: ಬಾಲಿವುಡ್ ನಟರಲ್ಲಿ ಅಕ್ಷಯ್ ಕುಮಾರ್ ತಮ್ಮದೇ ಆದ ಅಭಿಮಾನಿಗಳ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಹಲವು ದಶಕಗಳಿಂದಲೂ ಬಾಲಿವುಡ್ನಲ್ಲಿ ಮಿಂಚುತ್ತಿರುವ ಅಕ್ಷಯ್ ಕುಮಾರ್ ಕೂಡ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಸದ್ಯ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಎಂಬ ಜನಪ್ರಿಯ ಶೋಗಳಲ್ಲಿ ಅಕ್ಷಯ್ ಹಾಗೂ ಸಮಂತಾ ಭಾಗವಹಿಸಿದ್ದರು. ಈ ವೇಳೆ ಹಲವು ವೈಯಕ್ತಿಕ ವಿಚಾರ, ಟೀಕೆಗಳ ಬಗ್ಗೆಯೂ ಚರ್ಚೆ ನಡೆಯಿತು. ಹೀಗೆ ನಿಮಗೆ ಕೆನಡಾ ಕುಮಾರ್ ಎಂದು ಕರೆಯುತ್ತಾರೆ, ಈ ಬಗ್ಗೆ ಏನು ಹೇಳುತ್ತೀರಿ ಎಂದ ಕರಣ್ ಪ್ರಶ್ನೆಗೆ ಅಕ್ಷಯ್ ಉತ್ತರಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಟೀಕೆಗೆ ಉತ್ತರ ನೀಡುತ್ತಿದ್ದು, ಇದರಿಂದ ನನಗೇನೂ ತೊಂದರೆ ಇಲ್ಲ, ಕರೆಯುವವರು ಕರೆಯಲಿ ಬಿಡಿ ಎಂದು ಪ್ರತಿಕ್ರಿಯಿಸಿದ್ದಾರೆ.
2019ರ ಲೋಕಸಭಾ ಚುನಾವಣೆ ಬಳಿಕ ಅಕ್ಷಯ್ ಕುಮಾರ್ ಭಾರತದಲ್ಲಿ ಮತ ಚಲಾಯಿಸುವ ಹಕ್ಕಿಲ್ಲ ಎಂಬ ಬಗ್ಗೆ ಭಾರೀ ಟೀಕೆಗೊಳಗಾಗಿದ್ದರು. ಇಲ್ಲಿ ಖ್ಯಾತಿ, ಹಣ ಪಡೆದ ನೀವು ಬೇರೆ ದೇಶದ ನಾಗರಿಕತೆ ಹೊಂದಿದ್ದೀರಿ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.
ಇನ್ನು ನಿಮಗಿಂತ ಕಿರಿಯ ನಾಯಕಿಯರ ಜತೆ ನೀವು ನಟಿಸುತ್ತೀರಿ ಹೀಗೆ ಏಕೆ ಎಂಬ ಪ್ರಶ್ನೆಗೆ, ಈ ಬಗ್ಗೆ ಪ್ರಶ್ನೆ ಕೇಳುವವರಿಗೆ ಅಸೂಯೆ ಇರಬಹುದು ಎಂದು ಹೇಳಿದ್ದಾರೆ. ಅಸೂಯೆಯಿಂದಲೇ ನನ್ನನ್ನು ಈ ರೀತಿ ಟೀಕೆಗೆ ಗುರಿಮಾಡುತ್ತಾರೆ ಎಂದು ಅಕ್ಷಯ್ ಉತ್ತರಿಸಿದ್ದಾರೆ.(ಏಜೆನ್ಸೀಸ್)