

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಮತ್ತು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಂಡವರು ಶ್ರೀನಿಗರ ಕಿಟ್ಟಿ. ಅದಕ್ಕೆ ಉದಾಹರಣೆಯಾಗಿ 'ಇಂತಿ ನಿನ್ನ ಪ್ರೀತಿಯ, 'ಸಂಜು ವೆಡ್ಸ್ ಗೀತಾ', 'ಮತ್ತೆ ಮುಂಗಾರು', 'ಟೋನಿ' ಮುಂತಾದ ಹಲವು ಚಿತ್ರಗಳನ್ನು ಹೆಸರಿಸಬಹುದು. ಈಗ ಆ ಸಾಲಿಗೆ 'ಗೌಳಿ' ಎಂಬ ಹೊಸ ಚಿತ್ರವನ್ನೂ ಸೇರಿಸಬಹುದಂತೆ.
ಇದನ್ನೂ ಓದಿ: ನಿರ್ಮಾಪಕರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ …
'ಗೌಳಿ', ಕಿಟ್ಟಿ ಅಭಿನಯದ ಹೊಸ ಚಿತ್ರ. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಆರ್.ಪಿ.ಸಿ.ಲೇಔಟ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಈ ಚಿತ್ರವನ್ನು ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘು ಸಿಂಗಂ ನಿರ್ಮಿಸುತ್ತಿದ್ದಾರೆ. ಇನ್ನು, ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ, ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಸೂರ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ಇಬ್ಬರಿಗೂ ಈ ಚಿತ್ರ ಮೊದಲ ಪ್ರಯತ್ನ.
ಈ ಚಿತ್ರದ ಕುರಿತು ಮಾತನಾಡವ ಸೂರ, 'ಶ್ರೀನಗರ ಕಿಟ್ಟಿ ಅವರನ್ನು ಇದುವರೆಗೆ ಯಾರೂ ತೋರಿಸಿರದಂಥ ವಿಭಿನ್ನ ಶೈಲಿಯ ಪಾತ್ರದಲ್ಲಿ ತೋರಿಸುವುದಕ್ಕೆ ಹೊರಟಿದ್ದೇವೆ. ಗೌಳಿ ಎನ್ನುವುದು ಚಿತ್ರದ ನಾಯಕನ ಹೆಸರು. ಈ ಪದಕ್ಕೆ ಇನ್ನೊಂದು ಅರ್ಥವೂ ಇದೆ, ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ, ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಈ ಹೆಸರು ಬಹುಬೇಗ ಅರ್ಥವಾಗಿಬಿಡುತ್ತದೆ' ಎನ್ನುತ್ತಾರೆ.
'ಗೌಳಿ' ಚಿತ್ರಕ್ಕಾಗಿಯೇ ಕಿಟ್ಟಿ ಉದ್ದ ಗಡ್ಡ ಬಿಟ್ಟಿರುವುದಷ್ಟೇ ಅಲ್ಲ, ಮೂರು ತಿಂಗಳ ಕಾಲ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. ಇದೇ ತಿಂಗಳಲ್ಲಿ ಶಿರಸಿ, ಯಲ್ಲಾಪುರ ಮುಂತಾದೆಡೆ 'ಗೌಳಿ' ಚಿತ್ರದ ಚಿತ್ರೀಕರಣ ನಡೆಯಲಿದೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ. ನಾಯಕಿಯಾಗಿ ಪಾವನಾ ಗೌಡ ನಟಿಸುತ್ತಿದ್ದು, ರಂಗಾಯಣ ರಘು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.