

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕನ್ನಡದಲ್ಲಿ 60, ತಮಿಳಿನಲ್ಲಿ 40, ತೆಲುಗಿನಲ್ಲಿ 20 ಸೇರಿ ಮಲಯಾಳಂ ಚಿತ್ರಗಳಲ್ಲಿ ಮಿಂಚಿರುವ ನಟ ಕಿಶೋರ್, ಕೆಲ ವೆಬ್ಸರಣಿಗಳಲ್ಲೂ ನಟಿಸಿದ್ದಾರೆ. ಅವರು ಕೆಲ ವರ್ಷಗಳಿಂದ ಕೃಷಿಯಲ್ಲೂ ತೊಡಗಿರುವುದು ಗೊತ್ತಿದೆ. ವಿವಿಧ ಭಾಷೆಗಳಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕಿಶೋರ್, ಇದುವರೆಗೆ ತೆರೆಯ ಮೇಲೆ ರೈತನ ಪಾತ್ರ ಮಾಡಿರಲಿಲ್ಲ. ಆ ಅವಕಾಶ ಅವರಿಗೆ ಸತ್ಯನಾಥ್ ನಿರ್ದೇಶನದ "ಕಬಂಧ' ಚಿತ್ರದಲ್ಲಿ ದೊರೆತಿದೆ. ಪಾತ್ರದ ಬಗ್ಗೆ, "ರೈತರ ಸಮಸ್ಯೆಗಳ ಕುರಿತ ಸಿನಿಮಾ. ಪುಟ್ಟ ಪಾತ್ರವಾದರೂ ಕೃಷಿಕನ ಪಾತ್ರ. ಹಾರರ್ ಎಲ್ಲ ಪ್ರೇಕ್ಷಕರಿಗೂ ಇಷ್ಟವಾಗುವ ಜಾನರ್. ಆ ಜಾನರ್ನಲ್ಲಿ ರಾಸಾಯನಿಕ ಬಳಕೆಯ ಬಗ್ಗೆ ತಿಳಿಸುವ ಪ್ರಯತ್ನ' ಎಂದು ಮಾಹಿತಿ ನೀಡುತ್ತಾರೆ ಕಿಶೋರ್.
ಎಲ್ಲವೂ ವಿಷಮಯ
ಕೃಷಿಯಲ್ಲಿ ರಾಸಾಯನಿಕಗಳ ಬಳಿಕೆಯ ಬಗ್ಗೆ ಕಿಶೋರ್, "ನೀರು, ಗಾಳಿ, ಆಹಾರ ಎಲ್ಲವೂ ಟಾಕ್ಸಿಕ್ ಆಗಿದೆ. ಎಲ್ಲದರಲ್ಲೂ ರಾಸಾಯನಿಕವಿದೆ. ಜಾಗೃತಿ ಮೂಡಿಸಿದರಷ್ಟೇ ನಮಗೆ ಉಳಿಗಾಲ. ನಮ್ಮ ಮಕ್ಕಳಿಗಾಗಿ ನಾವು ಎಚ್ಚೆತ್ತುಕೊಳ್ಳಬೇಕಿದೆ. "ನೀರನ್ನು ಕಾರ್ಖಾನೆಗಳಲ್ಲ ಕೃಷಿ ಮಲಿನಗೊಳಿಸುತ್ತಿದೆ' ಎಂಬ ಫುಕುವೊಕಾ ಮಾತು ಅಕ್ಷರಶಃ ಸತ್ಯ. ಕೃಷಿಯಲ್ಲಿ ಬಳಸುವ ರಾಸಾಯನ ನೀರು, ಗಾಳಿ, ಮಣ್ಣು ಸೇರಿ ಎಲ್ಲವೂ ಮಲಿನಗೊಳ್ಳುತ್ತಿದೆ. ಆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಈ ಚಿತ್ರದಲ್ಲಾಗಿದೆ' ಎಂದು "ಕಬಂಧ' ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
ದ ಬೆಸ್ಟ್ ಹಣ್ಣುಗಳು
ಬನ್ನೇರುಟ್ಟ ಮತ್ತು ಮಾಗಡಿಯಲ್ಲಿ ತೋಟ ಮಾಡುತ್ತಿರುವ ಕಿಶೋರ್, "ಎಲ್ಲ ಹಣ್ಣಿನ ಗಿಡಗಳನ್ನೂ ನ್ಯಾಚುರಲ್ ಆಗಿ ಬೆಳೆಸಿದ್ದೇವೆ. ಹಣ್ಣುಗಳು ಅಷ್ಟು ಚೆನ್ನಾಗಿರುತ್ತೆ ಅಂತ ನನ್ನ ಜೀವನದಲ್ಲಿ ಅಂದುಕೊಂಡಿರಲಿಲ್ಲ. ಬಟರ್ ಫ್ರೂಟ್, ಕಿತ್ತಳೆ, ಹಲಸು ದ ಬೆಸ್ಟ್ ಹಣ್ಣುಗಳನ್ನು ಬೆಳೆದು ತಿನ್ನುತ್ತೇವೆ. ಜತೆಗೆ ಪ್ರಯೋಗ ಮಾಡುತ್ತಿರುತ್ತೇನೆ. ಆದರೆ, ಯಾವುದೂ ವರ್ಕ್ ಆಗುತ್ತಿಲ್ಲ' ಎನ್ನುತ್ತಾರೆ.
ಸಾಹಿತ್ಯ- ಸಿನಿಮಾ ಸಂಬಂಧ ಕಳಚಿದೆ
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರಿಲ್ಲ ಎಂಬುದರ ಬಗ್ಗೆ ಕಿಶೋರ್, "ನಾವು ಪ್ರೇಕ್ಷಕರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಆಗಾಗ ಉತ್ತಮ ಸಿನಿಮಾಗಳನ್ನು ಕೊಡುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಜತೆಗೆ ಜನ ಸಿನಿಮಾಗಳನ್ನು ಪರ್ಸನಲ್ ಆಗಿ ತೆಗೆದುಕೊಳ್ಳುತ್ತಾರೆ. ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು ಸೇರಿ ಈ ಬಗ್ಗೆ ಚರ್ಚಿಸಬೇಕು. ಮೊದಲು ಸಾಹಿತ್ಯ ಲೋಕಕ್ಕೂ ಸಿನಿಮಾಗೂ ನಂಟಿರುತ್ತಿತ್ತು. ಆದರೆ, ಈಗ ಸಾಹಿತಿಗಳ ನಂಟು ಕಳೆದುಕೊಂಡಿದ್ದೇನೆ. ಮಲಯಾಳಂನಲ್ಲಿ ಆ ನಂಟು ಇನ್ನೂ ಇದೆ. ನಮ್ಮ ಜನ ಸಾಹಿತ್ಯದಿಂದ ದೂರವಾಗಿರುವ ಕಾರಣ ಇಲ್ಲಿನ ಸಂಸತಿ, ಜೀವನಶೈಲಿಯಿಂದ ದೂರವಾಗಿದ್ದಾರೆ ಅನ್ನಿಸುತ್ತದೆ. ಹೀಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಿ ಒಂದು ಸಮಗ್ರ ಪರಿಹಾರ ಕಂಡುಕೊಳ್ಳಬೇಕು' ಎನ್ನುತ್ತಾರೆ.
ಸಂವಿಧಾನಬದ್ಧ ಆಲೋಚನೆಗಳು ಸಿನಿಮಾ ಆಗಬೇಕು
ಕಿಶೋರ್ಗೆ ಪರಭಾಷೆಗಳಿಂದಲೂ ಹೆಚ್ಚೆಚ್ಚು ಅವಕಾಶಗಳು ಬರುತ್ತಿವೆ. "ಕನ್ನಡದಲ್ಲಿ ಎಸ್. ಮಹೇಂದರ್ ಜತೆ ಒಂದು ಸಿನಿಮಾ ಮಾತುಕತೆ ನಡೀತಿದೆ. ತಮಿಳಿನಲ್ಲಿ ಎರಡು ಸ್ಟಾರ್ ಚಿತ್ರಗಳನ್ನು ಮಾಡಲಿದ್ದೇನೆ. ಕಥೆ ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಪಾತ್ರ ನನ್ನ ನಂಬಿಕೆಗೆ ವಿರುದ್ಧವಿದ್ದು, ಕಥೆ ಪೂರಕವಾಗಿದ್ದರೂ ಮಾಡಿದ್ದೇನೆ. ಆದರೆ, ಸಂವಿಧಾನಬದ್ಧವಾದ ಆಲೋಚನೆಯ ಸಮಪಾಲು, ಸಮಬಾಳು ಆಶಯವಿರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ' ಎನ್ನುತ್ತಾರೆ.
ಡೈರೆಕ್ಟರ್ ಕಿಶೋರ್
"ಸಿನಿಮಾ ನಿರ್ದೇಶಿಸುವ ಸರ್ಕಸ್ ನಡೀತಿದೆ. ಅದು ಎಲ್ಲಿಗೆ ತಲುಪುತ್ತೆ ಅಂತ ನನಗೂ ಸ್ಪಷ್ಟತೆ ಇಲ್ಲ' ಎಂದು ನಗುವ ಕಿಶೋರ್, "ಇತ್ತೀಚೆಗಷ್ಟೆ ಕೆಲ ಲೊಕೇಷನ್ ನೋಡಿಕೊಂಡು ಬಂದಿದ್ದೇನೆ. ವಲಸಿಗನ ಕುರಿತ ಕಥೆ. ಥ್ರಿಲ್ಲರ್ ಜಾನರ್ ಆದರೂ ಹಲವು ಅಂಶಗಳು ಚಿತ್ರದಲ್ಲಿವೆ. ಈ ವರ್ಷ ಪೂರ್ಣಗೊಳಿಸಲಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.
ಸೆನ್ಸಾರ್ಶಿಪ್ ಪ್ರಜಾಪ್ರಭುತ್ವಕ್ಕೆ ವಿರುದ್ಧ
ಸೆನ್ಸಾರ್ಗೆ ಒಳಪಡುವ ಸಿನಿಮಾಗಳ ಜತೆ ಸೆನ್ಸಾರ್ ಆಗದ ವೆಬ್ಸರಣಿಗಳಲ್ಲೂ ನಟಿಸಿರುವ ಕಿಶೋರ್, "ಇಮ್ತಿಯಾಜ್ ಅಲಿ, ರಾಜ್- ಡಿಕೆ, ವಸಂತ ಬಾಲನ್ ನಿರ್ದೇಶನದ ಸರಣಿಗಳಲ್ಲಿ ನಟಿಸಿದ್ದೇನೆ. ಅಲ್ಲಿ ನಿರ್ದೇಶಕರಿಗೆ ಸ್ವಾತಂತ್ರ್ಯವಿರುತ್ತದೆ. ಏನು ಹೇಳಬೇಕು ಅಂತ ಅಂದುಕೊಂಡಿದ್ದೀವೋ ಅದನ್ನು ಹೇಳಬಹುದು. ತಂಡಗಳೇ ಸ್ವ-ಸೆನ್ಸಾರಿಂಗ್ ಮಾಡಿಕೊಂಡು ಸರಣಿ ಮಾಡುತ್ತಿದ್ದಾರೆ. ಆದರೆ, ಸಿನಿಮಾದಲ್ಲಿ ಹಾಗಿಲ್ಲ. ಸೆನ್ಸಾರ್ಶಿಪ್ ಇಲ್ಲದೇ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲು ಜನರಿಗೆ ಸ್ವಾತಂತ್ರ್ಯ ನೀಡಬೇಕು. ಸೆನ್ಸಾರ್ ಪ್ರಜಾಪ್ರಭುತ್ವದ ವಿರುದ್ಧವಾದುದು. ನೀವು ಇದನ್ನು ನೋಡಬೇಕು, ಇದನ್ನು ನೋಡಬಾರದು ಅಂತ ಮತ್ತೊಬ್ಬರು ತೀರ್ಮಾನಿಸಬಾರದು' ಎನ್ನುತ್ತಾರೆ.