

ಬೆಂಗಳೂರು: ಯೋಗಿ ಅಭಿನಯದ 'ಒಂಬತ್ತನೇ ದಿಕ್ಕು' ಚಿತ್ರ ಈ ವರ್ಷದ ಆರಂಭದಲ್ಲೇ ಬಿಡುಗಡೆಯಾದರೂ ಹೆಚ್ಚು ಸೌಂಡು ಮಾಡಲಿಲ್ಲ. ಈಗ ಯೋಗಿ ಇನ್ನೊಂದು ಹೊಸ ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಅದೇ 'ಕಿರಿಕ್ ಶಂಕರ್'. ಮೇ 27ಕ್ಕೆ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
'ಕಿರಿಕ್ ಶಂಕರ್' ನಿರ್ದೇಶಿಸಿರುವುದು ಆರ್. ಅನಂತರಾಜು. ಈ ಹಿಂದೆ 'ಕೋಬ್ರಾ' ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಅನಂತರಾಜು, ಬಹಳ ದಿನಗಳ ನಂತರ 'ಕಿರಿಕ್ ಶಂಕರ್' ಮೂಲಕ ವಾಪಸ್ಸಾಗಿದ್ದಾರೆ. ಇನ್ನು, ಹಿರಿಯ ನಿರ್ಮಾಪಕ ಎಂ.ಎನ್. ಕುಮಾರ್ ಈ ಚಿತ್ರದ ನಿರ್ಮಾಪಕರು. ಯೋಗೇಶ್ ಹುಣಸೂರು ಬರೆದಿರುವ ಕಥೆಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚೆಗೆ 'ಕಿರಿಕ್ ಶಂಕರ್' ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. 'ನಾನು 'ತಾಜ್ ಮಹಲ್' ಚಿತ್ರ ಮಾಡಿದಾಗಿನಿಂದಲೂ ನಿರ್ಮಾಪಕ ಎಂ.ಎನ್. ಕುಮಾರ್ ನೀಡುತ್ತಿರುವ ಪ್ರೋತ್ಸಾಹ ಅಪಾರ. ಅವರು ಈಗ ಸಿನಿಮಾ ಮಾಡು ಅಂದರೂ, ನಾನು ಮಾಡುವುದಕ್ಕೆ ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರ ಯಶಸ್ವಿಯಾಗಲಿ' ಎಂದು ಚಂದ್ರು ಶುಭ ಹಾರೈಸಿದರು.
ಯೋಗಿ ಇಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ, ದೊಡ್ಡ ಬ್ಯಾನರ್ ಚಿತ್ರಗಳಲ್ಲಿ ನಟಿಸಿದ್ದು ಕಡಿಮೆಯೇ. ಈ ಕುರಿತು ಮಾತನಾಡಿದ ಅವರು, 'ನಾನು ಅಣ್ಣಾವ್ರ ಬ್ಯಾನರ್ ಬಿಟ್ಟರೆ ಇದೇ ದೊಡ್ಡ ಬ್ಯಾನರ್ ನಲ್ಲಿ ನಟನೆ ಮಾಡಿರುವುದು. ನಿರ್ದೇಶಕರು ಸಹ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವವರು. ಅವರ ಜೊತೆ ಕೆಲಸ ಮಾಡಿದ್ದು ಸಂತೋಷ ತಂದಿದೆ. ಎಲ್ಲರ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ' ಎಂದರು ನಾಯಕ ಲೂಸ್ ಮಾದ ಯೋಗಿ. ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಅದ್ವಿಕಾ ರೆಡ್ಡಿ ನಟಿಸಿದ್ದಾರೆ.
'ಇಡೀ ತಂಡದ ಪರಿಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಒಳ್ಳೆಯ ಮನಸ್ಸುಗಳು ಸೇರಿ ಮಾಡುವ ಕೆಲಸ ಒಳ್ಳೆಯದೆ ಆಗುತ್ತದೆ ಎಂಬ ಭರವಸೆ ಇದೆ. ನಮ್ಮ ಚಿತ್ರ ನೋಡಿ ಹಾರೈಸಿ' ಎಂದು ನಿರ್ದೇಶಕ ಅನಂತರಾಜು ಹೇಳಿದರು.
ಇನ್ನು, ಈ ಚಿತ್ರವನ್ನು ಏಪ್ರಿಲ್ನಲ್ಲೇ ಬಿಡುಗಡೆ ಮಾಡಬೇಕು ಅಂದುಕೊಂಡಿದ್ದರಂತೆ ನಿರ್ಮಾಪಕ ಕುಮಾರ್. 'ನಾನು ಏಪ್ರಿಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆ. ತುಂಬಾ ಚಿತ್ರಗಳು ಬಿಡುಗಡೆಯಾಗಿದ್ದರಿಂದ ಈ 27ರಂದು 150 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ಕಿರಿಕ್ ಶಂಕರ್" ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ' ಎಂದರು.