

| ಹರ್ಷವರ್ಧನ್ ಬ್ಯಾಡನೂರು
ಅದೊಂದು ಕಿರಿಕ್ ಗ್ಯಾಂಗ್. ಆ ಹುಡುಗ ರಿಗೆ ತಮ್ಮ ಏರಿಯಾದಲ್ಲಿ ಬರೀ ಕೀಟಲೆ, ತರಲೆ ಮಾಡುವುದನ್ನು ಬಿಟ್ಟರೆ ಬೇರೆ ಕೆಲಸವಿಲ್ಲ. ಅದರಿಂದಾಗಿಯೇ ಜೈಲು ಸೇರಿರುತ್ತಾರೆ. ಜೈಲಿನಲ್ಲಿ ಇವರ ಫ್ಲಾಶ್ಬ್ಯಾಕ್ ತೆರೆದುಕೊಳ್ಳುತ್ತದೆ. ಅಪ್ಪ-ಅಮ್ಮ ಇಲ್ಲದೇ ಇಬ್ಬರು ತಂಗಿಯರ ಜವಾಬ್ದಾರಿ ಹೊತ್ತಿರುವ ಶಂಕರನೇ ಈ ಕೇಡಿ ಗ್ಯಾಂಗ್ನ ಲೀಡರ್. ಇವರ ಕಿರಿಕಿರಿಗಳ ನಡುವೆ ಅವರ ಏರಿಯಾಗೆ ಸಹನಾ (ಅದ್ವಿಕ) ಹೊಸದಾಗಿ ಬರುತ್ತಾಳೆ. ಏರಿಯಾಗೆ ಬರುವ ಮುನ್ನವೇ ಕಿರಿಕ್ ಶಂಕರ್ಗೆ ಆವಾಜ್ ಹಾಕಿ ಕಿರಿಕಿರಿ ಮಾಡಿರುತ್ತಾಳೆ. ಊರಿಗೆ ಊರೇ ಈ ಕಿರಿಕ್ ಗ್ಯಾಂಗ್ಗೆ
ಹೆದರಿದರೂ, ಆ ಹುಡುಗಿ ಮಾತ್ರ ಇವರ ತಲೆಬಿಸಿ ಮಾಡಿರುತ್ತಾಳೆ. ಅಲ್ಲಿಗೆ ಇಂಟರ್ವಲ್ನಲ್ಲೊಂದು ರಕ್ತಸಿಕ್ತ ಟ್ವಿಸ್ಟ್, ಬಳಿಕ ಕಿರಿಕ್ ಹುಡುಗರು ತಮ್ಮ ಪ್ರತಿಭೆಯಿಂದ ಕಿಲಾಡಿಗಳಾಗುತ್ತಾರೆ. ಹೇಗೆ? ಕುತೂಹಲವಿದ್ದರೆ ಸಿನಿಮಾ ನೋಡಿ... ಯೋಗಿ ಕಳೆದ ಹಲವು ದಿನಗಳಿಂದ ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿದ್ದಾರೆ. ಆದರೆ, ಅವರಿಗೆ ಉಪಯೋಗವಾಗುವ, ಅವರನ್ನು ಚೆನ್ನಾಗಿ ಉಪ ಯೋಗಿಸಿಕೊಳ್ಳುವ ಒಂದೊಳ್ಳೆಯ ಕಥೆ ಸಿಗುತ್ತಿಲ್ಲ. ಎಂದಿನಂತೆ ಲೀಲಾಜಾಲವಾಗಿ ಸಿನಿಮಾ ಪೂರ್ತಿ ಓಡಾಡಿದ್ದಾರೆ, ಹೊಡೆದಾಡಿದ್ದಾರೆ, ಕುಣಿದಾಡಿದ್ದಾರೆ, ಹಾಡು ಕೂಡ ಹಾಡಿದ್ದಾರೆ! ನಾಯಕಿ ಅದ್ವಿಕಾಗೆ ಇದು ಚೊಚ್ಚಲ ಪ್ರಯತ್ನ. ಕೆಲವೆಡೆ ಭರವಸೆ ಮೂಡಿಸುತ್ತಾರೆ. ರಾಮ್ ಪವನ್, ಬಲರಾಜವಾಡಿ, ಪ್ರಶಾಂತ್ ಸಿದ್ದಿ ಸೇರಿದಂತೆ ಉಳಿದ ಪಾತ್ರಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿರ್ದೇಶಕ ಅನಂತರಾಜು ಅವರು ಸರಳ ಕಥೆಗೆ ಬೇರೆ ರೀತಿಯ ಆಯಾಮ ನೀಡುವ ಪ್ರಯತ್ನ ಮಾಡಿದ್ದಾರೆ. ವೀರ್ ಸಮರ್ಥ್ ಬಿಜಿಎಂ ಚಿತ್ರಕ್ಕೆ ಪೂರಕವಾಗಿದೆ. ಯೋಗಿ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಬಹುದು.