

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಈ ವರ್ಷ ಭಕ್ತಿಪ್ರಧಾನ ಚಿತ್ರಗಳು ಅತಿ ಕಡಿಮೆ. ಕೆಲ ದಿನಗಳ ಹಿಂದಷ್ಟೇ ರಾಧಿಕಾ ನಟಿಸಿದ್ದ "ಭೈರಾದೇವಿ' ರಿಲೀಸ್ ಆಗಿತ್ತು. ಇದೀಗ "ಸಿಂಹರೂಪಿಣಿ' ಬಿಡುಗಡೆಯಾಗಿದೆ. "ಕೆಜಿಎ್' ಚಿತ್ರದ "ಗರ್ಭದಿ' ಸೇರಿ ಹಲವು ಸಿನಿಮಾ ಗೀತೆಗಳಿಗೆ ಸಾಹಿತ್ಯ ಬರೆದಿರುವ ಕಿನ್ನಾಳ್ ರಾಜ್ ಈ ಚಿತ್ರಕ್ಕೆ ಚೊಚ್ಚಲ ಬಾರಿಗೆ ಆ್ಯಕ್ಷನ್&ಕಟ್ ಹೇಳಿದ್ದಾರೆ. ರಾಕ್ಷಸರನ್ನು ಸಂಹರಿಸಲು ಪಾರ್ವತಿಯು ಏಳು ಅವತಾರ ತಾಳುತ್ತಾಳೆ. ಅವುಗಳಲ್ಲಿ ಕೊನೆಯ ಅವತಾರವೇ ಮಾರಮ್ಮದೇವಿ. "ಸಿಂಹರೂಪಿಣಿ'ಯಲ್ಲಿ ಮಾರಮ್ಮದೇವಿಯ ಮಹಾತ್ಮೆ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕಿನ್ನಾಳ್ ರಾಜ್.
ಪಾಪಿಗಳು ಮತ್ತವರ ಪಾಪದ ಕೆಲಸಗಳು ಹೆಚ್ಚಾದಾಗ, ಅಂತಹ ದುಷ್ಟರನ್ನು ಶಿಸಿ, ಶಿಷ್ಟರನ್ನು ರಸಲು ದೇವರು ಭೂಮಿಗೆ ಬರುತ್ತಾರೆ ಎನ್ನಲಾಗುತ್ತದೆ. ಅದೇ ರೀತಿ ದೇವರ ವಿರುದ್ಧವೇ ಯರಪ್ಪನಹಳ್ಳಿಯ ಕೆಲ ದುರುಳರು ಹೇಗೆ ಸಂಚು ಮಾಡುತ್ತಾರೆ? ಅದರಿಂದ ಅಲ್ಲಿನ ಜನರಿಗೆ ಉಂಟಾಗುವ ಸಮಸ್ಯೆಗಳೇನು? ಮಾರಮ್ಮದೇವಿಯು ಅಲ್ಲಿಗೆ ಹೇಗೆ ಹೋಗುತ್ತಾಳೆ? ದುಷ್ಟರನ್ನು ಹೇಗೆ ಶಿಸುತ್ತಾಳೆ? ದೇವಿಗೆ ಕೋಣಬಲಿ ಯಾಕೆ ನೀಡುತ್ತಾರೆ? ಆಕೆಯ ಪವಾಡಗಳೇನು? ಎಂಬುದರ ಸುತ್ತ "ಸಿಂಹರೂಪಿಣಿ' ಕಥೆ ಸಾಗುತ್ತದೆ. ಭಕ್ತಿಪ್ರಧಾನ ವಿಷಯಗಳ ಜತೆ ಚಿತ್ರದಲ್ಲಿ ಲವ್ಸ್ಟೋರಿಯ ಮತ್ತೊಂದು ಎಳೆಯೂ ಇದೆ. ಎರಡನ್ನೂ ಸರಿದೂಗಿಸಿಕೊಂಡು ನೋಡಿಸಿಕೊಂಡು ಹೋಗುತ್ತಾರೆ ಕಿನ್ನಾಳ್ ರಾಜ್. ಅವರೇ ಚಿತ್ರದ ಸಂಭಾಷಣೆ, ಸಾಹಿತ್ಯ ಬರೆದಿದ್ದು, ಆಕಾಶ್ ಪರ್ವ ಸಂಗೀತದ ಎರಡು ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ.
ನಿರೂಪಕಿ ಅಂಕಿತಾ ಗೌಡ ನಾಯಕಿಯಾಗಿರುವ ಮೊದಲ ಚಿತ್ರದಲ್ಲೇ ಗಮನ ಸೆಳೆಯುತ್ತಾರೆ. 120ಕ್ಕೂ ಹೆಚ್ಚು ಪೋಷಕ ಕಲಾವಿದರು ಚಿತ್ರದಲ್ಲಿದ್ದು ಮಾರಮ್ಮ ದೇವಿಯಾಗಿ ಯಶಸ್ವಿನಿ ಸುಬ್ಬೇಗೌಡ, ಸುಮನ್, ಹರೀಶ್ ರೈ, ನಂಜುಂಡೇಶ್ವರ, ವಿಜಯ್ ಚೆಂಡೂರ್, ತಬಲಾ ನಾಣಿ, ದಿವ್ಯಾ ಆಲೂರ್, ದಿನೇಶ್ ಮಂಗಳೂರು, ಯಶ್ ಶೆಟ್ಟಿ, ಖುಷಿ ಬಸ್ರೂರು ಸೇರಿ ಬಹುತೇಕರು ಅಚ್ಚುಕಟ್ಟಾಗಿ ಪಾತ್ರಗಳನ್ನು ನಿಭಾಯಿಸಿದ್ದಾರೆ. ಕಿರಣ್ ಕುಮಾರ್ ಛಾಯಾಗ್ರಹಣ ಚಿತ್ರಕ್ಕೆ ಪೂರಕವಾಗಿದೆ. ಮತ್ತೊಂದು ಕಥೆಗೆ ಲಿಂಕ್ ಕೊಟ್ಟು ಚಿತ್ರದ ಕಥೆಗೆ ಅಂತ್ಯ ಹಾಡಿರುವುದು, ಸೀಕ್ವಲ್ ಬಗ್ಗೆ ಕುತೂಹಲ ಮೂಡಿಸುವಂತಿದೆ. ಒಟ್ಟಾರೆ ಕಮರ್ಷಿಯಲ್ ಅಂಶಗಳೊಂದಿಗೆ ಭಕ್ತಿಪ್ರಧಾನ ಚಿತ್ರ ನೋಡಲಿಚ್ಛಿಸುವವರು "ಸಿಂಹರೂಪಿಣಿ' ನೋಡಲಡ್ಡಿಯಿಲ್ಲ.