

ಬೆಂಗಳೂರು: ವಿಕ್ರಾಂತ್ ರೋಣ ಸಿನಿಮಾ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದೀರ್ಘ ವಿರಾಮ ಪಡೆದುಕೊಂಡಿದ್ದಾರೆ. ಸುಮಾರು 6 ತಿಂಗಳಾದರೂ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಒಂದು ಸುಳಿವು ಕೂಡ ಸುದೀಪ್ ನೀಡಿಲ್ಲ. ಆದರೆ, ಅಭಿಮಾನಿಗಳು ಮುಂದಿನ ಸಿನಿಮಾದ ಅಪ್ಡೇಟ್ ಕಾಯುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ಕೆಸಿಸಿ ಟೂರ್ನಿಯಲ್ಲೂ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಡಣದಲ್ಲಿ ಕಿಚ್ಚನ 46ನೇ ಸಿನಿಮಾದ ಅಪ್ಡೇಟ್ ಬೇಕು ಎಂದು ಭಿತ್ತಿ ಫಲಕ ಪ್ರದರ್ಶನ ಮಾಡಿದ್ದರು.
ಮಂಗಾತ ಮತ್ತು ಮಾನಾಡು ಸಿನಿಮಾ ಖ್ಯಾತಿ ನಿರ್ದೇಶಕ ವೆಂಕಟ್ಪ್ರಭು ಜೊತೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಅದು ಇನ್ನು ಅಧಿಕೃತವಾಗಿಲ್ಲ. ಅನೂಪ್ ಭಂಡಾರಿ ಜೊತೆ ಮತ್ತೆ ಸಿನಿಮಾ ಮಾಡುತ್ತಾರೆ ಎಂದು ಹೇಳಿಕೊಂಡು ಬರಲಾಗುತ್ತಿದ್ದರೂ ಆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಈಗ ಅಭಿಮಾನಿಗಳಿಗೆ ಸುದೀಪ್ ಮುಂದಿನ ಸಿನಿಮಾದ ಸುಳಿವು ಸಿಕ್ಕಿದ್ದು, ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಹೌದು, ಸುದೀಪ್ ಮುಂದಿನ ಸಿನಿಮಾ "ಬಿಲ್ಲ ರಂಗ ಬಾಷ". ಇನ್ನು ಅಧಿಕೃತವಾಗಿ ಘೋಷಣೆಯಾಗದಿದ್ದರೂ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ಕೊಟ್ಟ ಸುಳಿವು ಎಲ್ಲವನ್ನು ಖಚಿತಪಡಿಸಿದೆ. ನಿನ್ನೆ ಅನೂಪ್ ಭಂಡಾರಿ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಮೂಲಕ ತಮ್ಮದೇಯಾದ ಅಭಿಮಾನಿ ಬಳಗ ಹೊಂದಿರುವ ಅನೂಪ್ಗೆ ಶುಭಾಶಯಗಳ ಸುರಿಮಳೆ ಹರಿದುಬಂದಿದೆ. ಅದರಲ್ಲಿ ಹೆಚ್ಚಿನವರು ಸುದೀಪ್ ಅಭಿಮಾನಿಗಳಾಗಿದ್ದು, ಮುಂದಿನ ಸಿನಿಮಾ ಯಾವುದು ಎಂದು ಅನೂಪ್ ಅವರಿಗೆ ಟ್ವೀಟ್ ಮೂಲಕ ನಿನ್ನೆ ಬೆಳಗ್ಗೆಯಿಂದಲೇ ಕೇಳಿದ್ದಾರೆ.
ನಿನ್ನೆ ರಾತ್ರಿ ಹುಟ್ಟುಹಬ್ಬಕ್ಕೆ ಶುಭಕೋರಿದ ಎಲ್ಲರಿಗೂ ಟ್ವೀಟ್ ಮೂಲಕ ಧನ್ಯವಾದ ಹೇಳಿದ ಅನೂಪ್ ಭಂಡಾರಿ, ಕಿಚ್ಚನ ಅಭಿಮಾನಿಗಳಿಗೆ ಭರ್ಜರಿ ಸುಳಿವೊಂದನ್ನು ನೀಡಿದ್ದಾರೆ. ಮುಂದಿನ ಸಿನಿಮಾದ ಹೆಸರನ್ನು ನೇರವಾಗಿ ಹೇಳದಿದ್ದರೂ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಸುಳಿವನ್ನು ನೀಡಿದ್ದಾರೆ.
ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು.
ಬಿ ಗಿಯಾಗ್ ಕೂತ್ಕೋಳಿ,
ರಂ ಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು
ಬಾ ಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ
Be Right Back!
ಎಂದು ಅನೂಪ್ ಟ್ವೀಟ್ ಮಾಡಿದ್ದಾರೆ. ಮೂರು ಸಾಲುಗಳಲ್ಲಿ ಮೊದಲ ಅಕ್ಷರಕ್ಕೆ ಅನೂಪ್, ಅಂತರವನ್ನು ನೀಡಿದ್ದು, ಅದು ಮುಂದಿನ ಸಿನಿಮಾದ ಸುಳಿವು ನೀಡಿದೆ. ಬಿ ಅಂದರೆ ಬಿಲ್ಲ, ರಂ ಅಂದರೆ ರಂಗ ಮತ್ತು ಬಾ ಅಂದರೆ ಬಾಷ, ಒಟ್ಟಿಗೆ ಹೇಳುವುದಾಗಿ ಬಿಲ್ಲ ರಂಗ ಬಾಷ ಎಂದರ್ಥ. ಕೆಳಗೆ ಇಂಗ್ಲಿಷ್ನಲ್ಲಿ ಬಿ ರೈಟ್ ಬ್ಯಾಕ್ ಎಂದು ಬರೆಯಲಾಗಿದೆ. ಅದು ಕೂಡ ಸಿನಿಮಾ ಹೆಸರನ್ನೇ ಸೂಚಿಸುತ್ತದೆ. ಈ ಪದವನ್ನು ಅನೂಪ್ ಬಹಳ ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. Be Right Back ಅಂದರೆ ಬಿಆರ್ಬಿ (BRB). ಇದು ಕೂಡ ಬಿಲ್ಲ ರಂಗ ಬಾಷ ಎಂಬುದನ್ನು ಸೂಚಿಸುತ್ತದೆ.
ಇನ್ನು ಅನೂಪ್ ಸಹೋದರ ನಟ ನಿರೂಪ್ ಭಂಡಾರಿ ಕೂಡ ಸುಳಿವು ನೀಡಿದ್ದಾರೆ. ಹುಟ್ಟು ಹಬ್ಬದ ಶುಭಾಶಯಗಳು. ಈ ವರ್ಷ ಅತ್ಯುತ್ತಮವಾಗಿ ಉಜ್ವಲವಾಗಿರಲಿ ಎಂದು ಹಾರೈಸಿದ್ದಾರೆ. ನಿರೂಪ್ ಇಂಗ್ಲಿಷ್ನಲ್ಲಿ ಬರೆದಿರುವ May this year “Be Remarkably Brilliant” ಪದ ಬಿಆರ್ಬಿಗೆ ಹೊಂದಿಕೆ ಆಗುತ್ತದೆ. ಇಲ್ಲೂ ಕೂಡ ಬಿಆರ್ಬಿ ಇದೆ.
ಅಲ್ಲಿಗೆ ಕಿಚ್ಚನ ಮುಂದಿನ ಸಿನಿಮಾ ಬಿಲ್ಲ ರಂಗ ಬಾಷ ಎನ್ನುವುದು ಖಚಿತವಾದಂತಿದೆ. ಅಂದಹಾಗೆ ಬಿಲ್ಲಾ ರಂಗ ಬಾಷಾ ಸಿನಿಮಾ ಕಥೆಯು 2209 A.D ನಲ್ಲಿ ನಡೆಯುತ್ತದೆ. ಅಂದರೆ ಮುಂದಿನ 200 ವರ್ಷಗಳ ಕಾಲ್ಪನಿಕ ಕತೆ ಇದಾಗಿದ್ದು, ಸ್ಟೋರಿ ಲೈನ್ನಿಂದಲೇ ಬಿಲ್ಲ ರಂಗ ಬಾಷ ಸಿನಿಮಾ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರು ಕೈಹಾಕಿದ್ದಾರೆ. ಯುಗಾದಿ ಹಬ್ಬದಂದು ಸಿನಿಮಾ ಘೋಷಣೆಯಾಗುವ ಸಾಧ್ಯತೆ ಹೆಚ್ಚಿದ್ದು, ಎಲ್ಲರ ಕೂತೂಹಲಕ್ಕೆ ಅಂದೆ ತೆರೆ ಬೀಳಬಹುದು.