

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
‘ಸಿದ್ಧಾರ್ಥ್‘, ‘ರನ್ ಆ್ಯಂಟನಿ‘, ‘10‘, ‘ಒಂದು ಸರಳ ಪ್ರೇಮಕಥೆ‘ ಚಿತ್ರಗಳ ಬಳಿಕ ವಿನಯ್ ರಾಜಕುಮಾರ್ ನಟಿಸಿರುವ ಸಿನಿಮಾ ‘ಪೆಪೆ‘. ಇತ್ತೀಚೆಗಷ್ಟೆ ನಟ ಕಿಚ್ಚ ಸುದೀಪ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ‘ವಿನಯ್ ನನಗೆ ಟ್ರೇಲರ್ ತೋರಿಸಿದಾಗ ಗೊತ್ತೋ ಗೊತ್ತಿಲ್ಲದೆಯೋ ನನ್ನ ಮನೆಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇನೆ. ಎಷ್ಟೋ ಬಾರಿ ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದೇವೆ. ಟ್ರೇಲರ್ ಲಾಂಚ್ ಮಾಡುವಾಗ ನಾನು ಸುದೀಪ್ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ನನಗೆ ಆ ಟ್ರೇಲರ್ ಇಷ್ಟವಾಯ್ತು ಎಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ನಾನು ಒಬ್ಬ ಪ್ರೇಕ್ಷಕ. ನನಗೂ ಸಿನಿಮಾ ನೋಡಬೇಕು ಎಂಬ ಆಸೆ ಇರುತ್ತದೆ. ನಾವು ಮಾಡಿರುವ ಸಿನಿಮಾಗಳನ್ನು ಎಂಜಾಯ್ ಮಾಡಲು ಆಗುವುದಿಲ್ಲ. ಪೆಪೆ ಟ್ರೇಲರ್ ನೋಡಿ ಬಹಳ ಹೆಮ್ಮೆಯಾಗುತ್ತಿದೆ. ವಿನಯ್ ನೀವು ಫೈನಲ್ ಮನುಷ್ಯರಾಗಿದ್ದೀರ. ಚಾಕಲೇಟ್ ಹೀರೋ, ಪ್ರೀತಿ, ಲವ್ ಸ್ಟೋರಿ ಬಳಿಕ ಇಲ್ಲಿಂದ ಒಬ್ಬ ಗಂಡಸಾಗಿ ಪರದೆಯ ಕಾಣಿಸಿಕೊಳ್ಳುತ್ತಾನೆ ಅಲ್ಲಿಂದ ಹೀರೋ ಆಗಿ ಜರ್ನಿ ಶುರುವಾಗುತ್ತದೆ. ಅದ್ಭುತ ಟ್ರೇಲರ್, ಅದ್ಭುತ ಮ್ಯೂಸಿಕ್, ವಿನಯ್ ಅದ್ಭುತ ಕೆಲಸ ಮಾಡಿದ್ದೀರ‘ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.
ನಾಯಕ ವಿನಯ್ ರಾಜ್‍ಕುಮಾರ್, ‘ಸುದೀಪ್ ಸರ್ ಧನ್ಯವಾದ. ನಿಮ್ಮ ಸಲಹೆ, ಬಹಳಷ್ಟು ವಿಷಯ ಕೇಳಿ ಖುಷಿ, ಸಪೋರ್ಟ್ ಹಾಗೂ ಕಾನ್ಫಿಡೆನ್ಸ್ ಬಂತು. ಪೆಪೆ ಎರಡು ವರ್ಷದ ಜರ್ನಿ. ಎಲ್ಲರು ಚಿತ್ರಕ್ಕೆ ಶ್ರಮ ಹಾಕಿದ್ದಾರೆ. ಕೊಡಗು, ಕಾಡು ಅಂದರೆ ಪ್ರಾಣ. ಇಲ್ಲಿ ಶೂಟಿಂಗ್ ಎಂದರು. ಚಿತ್ರ ಒಪ್ಪಿಕೊಳ್ಳಲು ಇದು ಮೊದಲ ಕಾರಣ. ಚಿತ್ರದ ಕಥೆ ಮತ್ತೊಂದು ಕಾರಣ. ಚಿತ್ರದಲ್ಲಿ ತುಂಬಾ ಸ್ಟ್ರಾಂಗ್ ಪಾತ್ರಗಳಿವೆ. ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬರು ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಾರೆ. ಆಗಸ್ಟ್ 30ರಂದು ಚಿತ್ರ ಬಿಡುಗಡೆಯಾಗಲಿದೆ‘ ಎಂದರು.
ಚಿತ್ರದಲ್ಲಿ ವಿನಯ್ಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್‌ರನ್ನು ಒಳಗೊಂಡ ತಾರಾಬಳಗವಿದೆ. 'ಪೆಪೆ' ಸಿನಿಮಾವನ್ನು ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಕ್ಯಾಮೆರಾ ಕೆಲಸ ಮಾಡಿರುವುದು ಅಭಿಷೇಕ್ ಕಾಸರಗೋಡು, ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿರುವುದು ರವಿವರ್ಮ, ಚೇತನ್ ಡಿಸೋಝಾ, ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ.