ಐದಲ್ಲ, ಐವತ್ತು ಸಿನಿಮಾ ಮಾಡಿ ಎಂದು ಆರ್​.ಚಂದ್ರುಗೆ ಅಭಯ ನೀಡಿದ ಕಿಚ್ಚ ಸುದೀಪ್​!

Scsacasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಕಬ್ಜ' ಚಿತ್ರದ ಬಳಿಕ ನಿರ್ದೇಶಕ ಆರ್​.ಚಂದ್ರು ಆರ್​ಸಿ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಐದು ಸಿನಿಮಾಗಳನ್ನು ಲಾಂಚ್​ ಮಾಡಿದ್ದರು. ಅದರಲ್ಲಿ ಮೊದಲನೆಯ "ಫಾದರ್​' ಸಿನಿಮಾ ಶೂಟಿಂಗ್​ ಅಂತಿಮ ಹಂತದಲ್ಲಿದ್ದು, ಅದೇ ಖುಷಿಯಲ್ಲಿ ಇತ್ತೀಚೆಗಷ್ಟೆ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಡಾರ್ಲಿಂಗ್​ ಕೃಷ್ಣ, ಪ್ರಕಾಶ್​ ರಾಜ್​, ಅಮೃತಾ ಅಯ್ಯಂಗಾರ್​, ನಾಗಭೂಷಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ರಾಜ್​ ಮೋಹನ್​ ನಿರ್ದೇಶನದ ಚಿತ್ರವಿದು.

ಇತ್ತೀಚೆಗಷ್ಟೆ ಫಸ್ಟ್​ ಲುಕ್​ ರಿಲೀಸ್​ ಮಾಡಿದ ನಟ ಕಿಚ್ಚ ಸುದೀಪ್​, "ಆರ್​.ಚಂದ್ರು ಐದು ಸಿನಿಮಾ ಘೋಷಣೆ ಮಾಡಿದಾಗ, ಹಲವರು ಐದ್​ ಚಂದ್ರು ಅಂತ ಆಡಿಕೊಳ್ಳುತ್ತಿದ್ದರು. ಆದರೆ, ಕಾಲೆಳೆಯುವವರು ಇದ್ದಾಗಲೇ ಬೆಳೆಯಲು ಸಾಧ್ಯ. "ಕಬ್ಜ' ರಿಲೀಸ್​ ಆದಾಗ ಕೆಲ ಮಾತುಗಳು ಬಂದವು. ಆ ರೀತಿಯ ಕಮೆಂಟ್ಸ್​ ಮಾಡುವುದನ್ನು ಬಿಟ್ಟು, ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿತ್ತು. ಅವರು ನನ್ನ ಸಹೋದರನಂತೆ. ಈಗ "ಫಾದರ್​' ಚಿತ್ರ ಮಾಡುತ್ತಿದ್ದಾರೆ. ಐದಲ್ಲ ಐವತ್ತು ಸಿನಿಮಾ ಮಾಡಿ, ಕನ್ನಡಕ್ಕಾಗಿ ಚಿತ್ರಗಳನ್ನು ಮಾಡುತ್ತಿದ್ದೀರಿ, ಮುಂದುವರಿಸಿ' ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.

ನಾಯಕ ಕೃಷ್ಣ, "ತುಂಬ ಸುಂದರವಾದ ವಿಷಯವಿರುವ, ಮನಸ್ಸಿಗೆ ಹತ್ತಿರವಾಗುವ ಸಿನಿಮಾ. ಒಬ್ಬ ನಟನಾಗಿ ಬೆಳೆಯಲು ಈ ಚಿತ್ರ ಕೂಡ ಉತ್ತಮ ವೇದಿಕೆಯಾಗಿದೆ. ಚಿತ್ರ ಪ್ಯಾನ್​ ಇಂಡಿಯಾ ಮೂಡಿಬರಲಿದೆ' ಎಂದರು. ಕೆಲವೇ ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ, ರಿಲೀಸ್​ಗೆ ಸಿದ್ಧತೆ ನಡೆಸುವ ಆಲೋಚನೆ ಚಿತ್ರತಂಡದ್ದು.

ಅವತ್ತೇ ಆಗಲಿಲ್ಲ, ಇವತ್ತೇಕೆ ಭಯ?

"ಕಬ್ಜ' ಚಿತ್ರಕ್ಕೆ ಸಿಕ್ಕ ಮಿಶ್ರ ಪ್ರತಿಕ್ರಿಯೆ, ಒಂದೇ ದಿನ ಐದು ಸಿನಿಮಾಗಳನ್ನು ಲಾಂಚ್​ ಮಾಡಿದ ಬಳಿಕ ಆರ್​. ಚಂದ್ರು ಹೆಚ್ಚು ಟ್ರೋಲ್​ ಆಗುತ್ತಿದ್ದರು. ಆ ಬಗ್ಗೆ, "ಮನೆಯಲ್ಲಿ ಮಲಗಿರುವವರ ಬಗ್ಗೆ ಯಾರೂ ಕಮೆಂಟ್​ ಮಾಡುವುದಿಲ್ಲ. ಬೆಳೆಯುತ್ತಿರುವವರ ಬಗ್ಗೆ ಕಮೆಂಟ್​ ಮಾಡುತ್ತಾರೆ. ಕೇಶಾವರದಿಂದ ಬಂದು 2002ರ ಫೆ. 14 ಮೆಜೆಸ್ಟಿಕ್​ ಪ್ಲಾಟ್​ಫಾಮ್​ರ್ನಲ್ಲಿ ಮಲಗಿದ್ದ ದಿನವೇ ನನಗೆ ಭಯವಿರಲಿಲ್ಲ. ಇನ್ನು ಈಗ 100 ಕೋಟಿ ರೂ. ಗಳಿಕೆಯ ಸಿನಿಮಾ ಮಾಡಿದ್ದೇನೆ. ಐದಲ್ಲ ಐವತ್ತು ಸಿನಿಮಾ ಮಾಡುವಷ್ಟು ಧೈರ್ಯ ಬಂದಿದೆ. ಎಲ್ಲರೂ ಪ್ಯಾನ್​ ಇಂಡಿಯಾ ಸಿನಿಮಾ ಮಾಡಬೇಕು. ಇಲ್ಲೇ 300 ಥಿಯೇಟರ್​ನಲ್ಲಿ ರಿಲೀಸ್​ ಮಾಡುವುದಕ್ಕಿಂತ, ದೇಶಾದ್ಯಂತ 3000 ಥಿಯೇಟರ್​ಗಳಲ್ಲಿ ರಿಲೀಸ್​ ಮಾಡೋಣ. ಕರ್ನಾಟಕದಲ್ಲಿ ಆಗುವಷ್ಟು ಬಿಜಿನೆಸ್​ ಕೊಲ್ಲಿ ರಾಷ್ಟ್ರಗಳಲ್ಲೂ ಆಗುತ್ತೆ. ಆದರೆ, ಯಾರೂ ಆ ಮಾರುಕಟ್ಟೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಹಿಂದಿ, ತೆಲುಗು, ತಮಿಳು ಸೇರಿ ಬೇರೆ ಬೇರೆ ಚಿತ್ರರಂಗಗಳ ನಿರ್ಮಾಪಕರು ನನ್ನ ಜತೆಗಿದ್ದಾರೆ. ಹೀಗಾಗಿ ಪ್ಯಾನ್​ ಇಂಡಿಯಾ ಸಿನಿಮಾಗಳತ್ತ ಗಮನ ಹರಿಸಿದ್ದೇನೆ' ಎಂದು ತಮ್ಮದೇ ರೀತಿಯಲ್ಲಿ ಯುವ ಚಿತ್ರತಂಡಗಳಿಗೆ ಆರ್​. ಚಂದ್ರು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net