ಸೈಕೋ ಸೈತಾನ್​ ಸುದೀಪ್​; "ಮಾರ್ಕ್​' ಮೊದಲ ಹಾಡಿನಲ್ಲಿ ಕಿಚ್ಚನ ಭರ್ಜರಿ ಡಾನ್ಸ್​

ascasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಮ್ಯಾಕ್ಸ್​' ಚಿತ್ರದ ಯಶಸ್ಸಿನ ಬಳಿಕ ಕಿಚ್ಚ ಸುದೀಪ್​ ಮತ್ತು ನಿರ್ದೇಶಕ ವಿಜಯ್​ ಕಾರ್ತಿಕೇಯನ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸಿನಿಮಾ "ಮಾರ್ಕ್​'. "ಮ್ಯಾಕ್ಸ್​'ನಲ್ಲಿ ಸರ್ಕಲ್​ ಇನ್ಸ್​ಪೆಕ್ಟರ್​ ಅರ್ಜುನ್​ ಮಹಾಕ್ಷಯ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿಚ್ಚ ಸುದೀಪ್​, ಇದೀಗ "ಮಾರ್ಕ್​'ನಲ್ಲಿ ಖಡಕ್​ ಪೊಲೀಸ್​ ಅಧಿಕಾರಿ ಅರ್ಜುನ್​ ಮಾರ್ಕಂಡೇಯನಾಗಿ ಮಿಂಚಲು ರೆಡಿಯಾಗಿದ್ದಾರೆ. ವಿಭಿನ್ನ ಹೇರ್​ಸ್ಟೈಲ್​ನಲ್ಲಿ ಎಂದಿನಂತೆ ಸ್ಟೈಲಿಶ್​ ಲುಕ್​ನಲ್ಲಿ ಈ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೆ ಚಿತ್ರದ "ಸೈಕೋ ಸೈತಾನ್​' ಎಂದು ಸಾಗುವ ಸಾಂಗ್​ ಬಿಡುಗಡೆ ಮಾಡಲಾಗಿದೆ.

"ಕಾಂತಾರ ಅಧ್ಯಾಯ 1'ರ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಈ ಹಾಡಿಗೆ ಸಂಗೀತ ನೀಡಿದ್ದು, "ವಿಕ್ರಾಂತ್​ ರೋಣ' ನಿರ್ದೇಶಕ ಅನೂಪ್​ ಭಂಡಾರಿ ಸಾಹಿತ್ಯದಲ್ಲಿ ಮೂಡಿಬಂದಿದೆ. ಕಿಚ್ಚ ಸುದೀಪ್​ ಆನ್​ಸ್ಕ್ರೀನ್​ ಮತ್ತು ಆಫ್​ಸ್ಕ್ರೀನ್​ ಮ್ಯಾನರಿಸಂ ಕುರಿತ ಈ ಹಾಡಿಗೆ ವಿಜಯ್​ ಪ್ರಕಾಶ್​, ಅನಿರುದ್ಧ ಶಾಸ್ತ್ರಿ ಜತೆ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಧ್ವನಿಯಾಗಿದ್ದಾರೆ. ಸತ್ಯಜ್ಯೋತಿ ಫಿಲಂಸ್​ ಮತ್ತು ಕಿಚ್ಚ ಕ್ರಿಯೇಷನ್ಸ್​ ಜಂಟಿಯಾಗಿ ನಿರ್ಮಿಸುತ್ತಿರುವ "ಮಾರ್ಕ್​' ಶೇಖರ್​ ಚಂದ್ರ ಛಾಯಾಗ್ರಹಣ, ಗಣೇಶ್​ ಬಾಬು ಸಂಕಲನದಲ್ಲಿ ಮೂಡಿಬರಲಿದೆ.

ಹುಕ್​ಸ್ಟೆಪ್​ ಚಾಲೆಂಜ್​

ಇತ್ತೀಚಿನ ವರ್ಷಗಳಲ್ಲಿ ನಟ ಕಿಚ್ಚ ಸುದೀಪ್​ ಹೆಚ್ಚು ಡಾನ್ಸ್​ ಮಾಡಿರಲಿಲ್ಲ. "ವಿಕ್ರಾಂತ್​ ರೋಣ'ದಲ್ಲಿ "ರಾರಾ ರಕ್ಕಮ್ಮ' ಎಂದು ಜಾಕ್​ಲೀನ್​ ರ್ನಾಂಡಿಸ್​ ಜತೆ, "ಕೋಟಿಗೊಬ್ಬ 3'ರಲ್ಲಿ ಆಶಿಕಾ ರಂಗನಾಥ್​ ಜತೆ "ಪಟಾಕಿ ಪೋರಿಯೋ' ಹಾಗೂ "ಮ್ಯಾಕ್ಸ್​' ಚಿತ್ರದ "ಮ್ಯಾಕ್ಸಿಮಮ್​ ಮಾಸ್​' ಸಾಂಗ್​ನಲ್ಲಿ ಹಾಡಿನ ಜತೆ ಫೈಟ್​ ಕೂಡ ಮಾಡಿದ್ದು ಬಿಟ್ಟರೆ, ಒಬ್ಬರೇ ಕುಣಿದಿದ್ದು ಕಡಿಮೆಯೇ. ಹೀಗಿರುವಾಗ "ಮಾರ್ಕ್​'ನ "ಸೈಕೋ ಸೈತಾನ್​'ನಲ್ಲಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.

ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿದೆಯಾದರೂ, ಹಾಡಿನ ಹುಕ್​ಸ್ಟೆಪ್​ ಉಳಿಸಿಕೊಳ್ಳಲಾಗಿದೆ. ಇನ್ನು ತಾವೊಬ್ಬರೇ ಕುಣಿದರೆ ಹೇಗೆ, ಅಭಿಮಾನಿಗಳನ್ನೂ ಕುಣಿಸಬೇಕು ಅಂತ ನಿರ್ಧರಿಸಿರುವ ಚಿತ್ರತಂಡ, ಈ ಹಾಡಿನ ಹುಕ್​ಸ್ಟೆಪ್​ ಚಾಲೆಂಜ್​ ನೀಡಿದೆ. ಈ ಹಾಡಿನ ಬಿಟ್​ಗೆ ಹುಕ್​ಸ್ಟೆಪ್​ ಮಾಡಿ, ಅದನ್ನು ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳಬೇಕು. ಅತ್ಯುತ್ತಮವಾಗಿ ಮೂಡಿಬಂದಿರುವ ರೀಲ್ಸ್​ಅನ್ನು ಮಾರ್ಕ್​ ಚಿತ್ರದ ಅಫಿಶಿಯಲ್​ ಅಕೌಂಟ್​ನಲ್ಲಿ ಹಂಚಿಕೊಳ್ಳಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net