

ಕನ್ನಡದಲ್ಲೂ ಕೆಲ ಸಿನಿಮಾ ಹಾಡುಗಳಿಗೆ ನೃತ್ಯನಿರ್ದೇಶನ ಮಾಡಿದ್ದ ತೆಲುಗಿನ ಖ್ಯಾತ ನೃತ್ಯನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಕಳೆದ ಸೆಪ್ಟೆಂಬರ್ನಲ್ಲಿ ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು. ಅವರ ತಂಡದಲ್ಲಿದ್ದ ಯುವತಿಯೊಬ್ಬರು, ಕೆಲ ವರ್ಷಗಳಿಂದ ನಿರಂತರವಾಗಿ ಜಾನಿ ಮಾಸ್ಟರ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಜಾನ ಒಂದು ತಿಂಗಳ ಜೈಲುವಾಸ ಬಳಿಕ ಅಕ್ಟೋಬರ್ನಲ್ಲಿ ಬೇಲ್ ಪಡೆದು ಬಿಡುಗಡೆಯಾಗಿದ್ದರು. ಅದರ ಬೆನ್ನಲ್ಲೇ ತೆಲುಗು ಸಿನಿಮಾ ನೃತ್ಯನಿರ್ದೇಶಕರ ಸಂಘದ ಅಧ್ಯಕ್ಷ ಸ್ಥಾನದಿಂದ ಜಾನಿಯನ್ನು ವಜಾ ಮಾಡಲಾಗಿತ್ತು. ಜತೆಗೆ ಅವರಿಗೆ ಸಂದಿಂದ ಗೇಟ್ಪಾಸ್ ಕೂಡ ನೀಡಲಾಗಿತ್ತು.
ಆದರೆ, ಅದಕ್ಕೂ ಮೊದಲೇ ಜಾನಿ ಕೆಲ ಸಿನಿಮಾಗಳಿಗೆ ನೃತ್ಯನಿರ್ದೇಶನ ಮಾಡಿದ್ದರು. ಅದರಲ್ಲಿ ರಾಮಚರಣ್ ತೇಜಾ, ಕಿಯಾರಾ ಅಡ್ವಾನಿ ನಟಿಸಿರುವ, ಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ "ಗೇಮ್ ಚೇಂಜರ್' ಚಿತ್ರದ "ಧೋಪ್' ಹಾಡು ಕೂಡ ಒಂದು. ಕಳೆದ ಭಾನುವಾರ (ಡಿ. 22) ಸಾಂಗ್ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡನ್ನು 13 ದಿನಗಳ ಕಾಲ ಚಿತ್ರೀಕರಿಸಲಾಗಿದ್ದು, ತಮ್ಮ ಸಿದ್ಧತೆಯ ಬಗ್ಗೆ ಕಿಯಾರಾ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ಜಾನಿ ಮಾಸ್ಟರ್ ಬಗ್ಗೆಯೂ ಹೇಳಿಕೊಂಡಿದ್ದರು. ಜಾಲತಾಣದಲ್ಲಿ ಕಿಯಾರಾ, ಜಾನಿ ಬಗ್ಗೆ ಮಾತನಾಡಿರುವುದಕ್ಕೆ ವಿರೋಧ ವ್ಯಕ್ತವಾಗಿತ್ತು.
ತಕ್ಷಣ ಎಚ್ಚೆತ್ತುಕೊಂಡ ಕಿಯಾರಾ ಯಾವುದೇ ಸ್ಪಷ್ಟನೆ ನೀಡದೇ ಜಾನಿ ಮಾಸ್ಟರ್ ಕುರಿತು ಬರೆದಿದ್ದನ್ನು ತಮ್ಮ ಜಾಲತಾಣದ ಪೋಸ್ಟ್ನಿಂದ ತೆಗೆದಿದ್ದಾರೆ. ಸದ್ಯ "ಧೋಪ್' ಹಾಡಿಗಿಂತಲೂ ಕಿಯಾರಾ ಅವರ ಪೋಸ್ಟ್ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಂದಹಾಗೆ, "ಗೇಮ್ಚೇಂಜರ್' 2025ರ ಜ. 10ರಂದು ತೆರೆಗೆ ಬರಲಿದೆ.