ಹೊಸ ಚಿತ್ರಕ್ಕೆ ನಾಲ್ಕು ಕೋಟಿ ... ಎಂಟು ಪಟ್ಟು ಹೆಚ್ಚಾಗಿದೆ ಕಿಯಾರಾ ಸಂಭಾವನೆ!

Kiara Advani - Final
Published on

ಮುಂಬೈ: ಕಿಯಾರಾ ಅಡ್ವಾಣಿಗೆ ತೆಲುಗು ಚಿತ್ರರಂಗ ಹೊಸದೇನಲ್ಲ. ಈ ಹಿಂದೆ ಮಹೇಶ್ ಬಾಬು ಅಭಿನಯದ ‘ಭರತ್ ಅನೇ ನೇನು’ ಮತ್ತು ರಾಮ್‌ಚರಣ್ ತೇಜ ಜತೆಗೆ ‘ವಿನಯ ವಿಧೇಯ ರಾಮ’ ಚಿತ್ರಗಳಲ್ಲಿ ಕಿಯಾರಾ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಗೆ 50 ಲಕ್ಷ ರೂ. ಸಂಭಾವನೆ ಕೊಟ್ಟಿದ್ದರೆ ಅದೇ ಹೆಚ್ಚು. ಏಕೆಂದರೆ, ಕಿಯಾರಾ ಆಗಿನ್ನೂ ಚಿತ್ರರಂಗಕ್ಕೆ ಹೊಸಬರು. ಮೇಲಾಗಿ ಆಕೆಯ ಹೆಸರಿನಲ್ಲಿ ಯಾವುದೇ ದೊಡ್ಡ ಹಿಟ್ ಇರಲಿಲ್ಲ. ಈಗ ಎರಡು ವರ್ಷಗಳ ನಂತರ ಕಿಯಾರಾ ಟಾಲಿವುಡ್‌ಗೆ ವಾಪಸ್ಸಾಗಿದ್ದಾರೆ. ಈ ಗ್ಯಾಪ್‌ನಲ್ಲಿ ಅವರು ಒಂದಿಷ್ಟು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಚಿತ್ರಗಳಲ್ಲಿ ಒಂದೆರೆಡು ಸೂಪರ್ ಹಿಟ್ ಸಹ ಆಗಿವೆ.

ಹೀಗಿರುವಾಗ, ವಾಪಸ್ಸಾಗಿರುವ ಕಿಯಾರಾ ಸಂಭಾವನೆ ಎಂಟು ಪಟ್ಟು ಹೆಚ್ಚಾಗಿದೆ. ಎರಡು ವರ್ಷಗಳ ಹಿಂದೆ 50 ಲಕ್ಷ ರೂ.ಗಳನ್ನು ಪಡೆದಿದ್ದ ಕಿಯಾರಾ, ಇದೀಗ ಹೊಸ ತೆಲುಗು ಚಿತ್ರವೊಂದರಲ್ಲಿ ನಟಿಸುವುದಕ್ಕೆ ನಾಲ್ಕು ಕೋಟಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು, ಚಿತ್ರದಲ್ಲಿ ನಟಿಸುವುದಕ್ಕೆ ಐದು ಕೋಟಿ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರಂತೆ ಕಿಯಾರಾ. ಆದರೆ, ಚಿತ್ರತಂಡದವರು ಒತ್ತಾಯದ ಮೇರೆಗೆ ನಾಲ್ಕು ಕೋಟಿ ರೂ.ಗಳಿಗೆ ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಮಿಳಿನ ಜನಪ್ರಿಯ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ರಾಮ್‌ಚರಣ್ ತೇಜ ನಟಿಸುತ್ತಿದ್ದು, ಅವರಿಗೆ ನಾಯಕಿಯಾಗಿ ಕಿಯಾರಾ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ವರ್ಷಾಂತ್ಯಕ್ಕೆ ಚಿತ್ರೀಕರಣ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net