ಕಾಯಕದಲ್ಲಿ ಖುಷಿ ಕಂಡುಕೊಂಡಿದ್ದೇನೆ ...

Khushi ravi
Published on

ಸಹಜವಾಗಿ ನವರಾತ್ರಿ ಅಂದರೆ ಅದು ದೇವಿಯರ ಪೂಜೆಗೆ ಮೀಸಲಿಡುವ ಹಬ್ಬ. ನಮ್ಮ ಮನೆಯಲ್ಲಿ ಈ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಗೊಂಬೆಗಳನ್ನು ಇಡುವ ಸಂಪ್ರದಾಯ ನಮ್ಮಲ್ಲಿಲ್ಲ. ಪ್ರತಿ ದಿನ ಒಂದೊಂದು ಬಣ್ಣದ ಸೀರೆ ತೊಡುವ ಆಚರಣೆಯೂ ಇಲ್ಲ. ಅದರ ಬದಲಿಗೆ ಸರಸ್ವತಿ ಪೂಜೆ ಮಾಡುತ್ತೇವೆ. ಅದನ್ನು ಬಿಟ್ಟರೆ, ನವರಾತ್ರಿಯ ಆಯುಧ ಪೂಜೆಯ ವೈಭವ ಚೂರು ಜೋರಾಗಿಯೇ ಇರುತ್ತದೆ. ಮನೆಯಲ್ಲಿನ ಆಯುಧಗಳನೆಲ್ಲ ಶುಚಿಮಾಡಿ ಪೂಜೆ ಮಾಡಲಾಗುತ್ತದೆ. ಆದರೆ, ಈ ವರ್ಷ ಹಬ್ಬದಾಚರಣೆಗಿಂತ ಒಪ್ಪಿಕೊಂಡ ಸಿನಿಮಾಗಳತ್ತ ಗಮನಹರಿಸಿದ್ದೇನೆ. ಏಕೆಂದರೆ, ಕಳೆದ ವರ್ಷ ಇದೇ ಹಬ್ಬದಂದು ನಾನು ಯಾರು ಎಂಬುದೇ ಜನರಿಗೆ ಗೊತ್ತಿರಲಿಲ್ಲ. ಈ ವರ್ಷ ‘ದಿಯಾ’ ಸಿನಿಮಾ ಸಾಕಷ್ಟು ಹೆಸರು ಮಾಡಿದೆ. ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡು ಇನ್ನೇನು ಶೂಟಿಂಗ್​ನಲ್ಲಿಯೂ ಭಾಗವಹಿಸಿದ್ದೇನೆ. ಹಾಗಾಗಿ ಕಾಯಕದಲ್ಲಿಯೇ ಖುಷಿ ಕಂಡುಕೊಂಡಿದ್ದೇನೆ. ಚಿಕ್ಕಂದಿನಲ್ಲಿ ದಸರಾ ಹಬ್ಬದ ಸಮಯದಲ್ಲಿ ಅಜ್ಜಿ ಮನೆಯಲ್ಲಿರುತ್ತಿದ್ದೆ. ಅವರು ನಡೆಸುತ್ತಿದ್ದ ಹೊಟೇಲ್​ನಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿರುತ್ತಿತ್ತು. ಇನ್ನು, ದಸರಾ ಸಮಯದಲ್ಲಿ ಒಂದೇ ಒಂದು ಬಾರಿ ನಾನು ಮೈಸೂರಿಗೆ ಹೋಗಿಲ್ಲ. ಈ ಬಾರಿಯಾದರೂ ಹೋಗಬೇಕು ಎಂದುಕೊಂಡಿದ್ದೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಇತ್ತು. ಕರೊನಾದಿಂದ ಅದೂ ಸಾಧ್ಯವಾಗಲಿಲ್ಲ. ಕರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಆಚರಣೆಗಳಲ್ಲಿಯೂ ಬದಲಾವಣೆಗಳಾಗಿವೆ. ಅದ್ದೂರಿತನಕ್ಕೆ ಬ್ರೇಕ್ ಬಿದ್ದಿದೆ. ಮನೆಯಲ್ಲಿಯೇ ಸರಳ ಹಬ್ಬದಾಚರಣೆ ಮಾಡಿ. ಮಾಸ್ಕ್ ಧರಿಸಿಯೇ ಮನೆಯಿಂದ ಆಚೆ ಬನ್ನಿ.

| ಖುಷಿ ರವಿ, ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net