

ಯುಗಾದಿ ಹಬ್ಬದಂದೇ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರದ ‘ಖರಾಬು’ ಎಂಬ ಹಾಡು ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಕಾಟದಿಂದ ಯಾರ ಮನೆ-ಮನದಲ್ಲೂ ಸಂಭ್ರಮವಿಲ್ಲ ಎಂಬ ಕಾರಣಕ್ಕೆ ಹಾಡಿನ ಬಿಡುಗಡೆ ಮುಂದೂಡಲಾಗಿತ್ತು. ಧ್ರುವ ಅಭಿಮಾನಿಗಳು ಯುಗಾದಿಗೆ ನಿರಾಸೆಗೊಂಡರೂ, ರಾಮನವಮಿ ಹಬ್ಬದಂದು ಖುಷಿಯಾಗಿದ್ದಾರೆ. ಗುರುವಾರ, ರಾಮನವಮಿಯ ಪ್ರಯುಕ್ತ, ‘ಖರಾಬು’ ಹಾಡು ಬಿಡುಗಡೆ ಮಾಡಲಾಗಿದೆ.
ಈ ಹಾಡಿನ್ನು ಬರೆಯುವುದರ ಜತೆಗೆ ಸಂಗೀತ ಸಂಯೋಜಿಸಿ, ಧ್ವನಿಯಾಗಿರುವುದು ರಾಪರ್ ಚಂದನ್ ಶೆಟ್ಟಿ. ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಮುಂತಾದವರ ಮೇಲೆ ಚಿತ್ರೀಕರಣಗೊಂಡಿರುವ ಈ ಹಾಡು, ಸಖತ್ ಮಾಸ್ ಆಗಿದ್ದು, ಈಗಾಗಲೇ ಮೆಚ್ಚುಗೆಗೆ ವ್ಯಕ್ತವಾಗಿದೆ.
ಅಂದಹಾಗೆ, ‘ಪೊಗರು’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ. ಹೈದರಾಬಾದ್‌ನಲ್ಲಿ ಈ ಹಾಡನ್ನು ಚಿತ್ರೀಕರಿಸಲು ಚಿತ್ರತಂಡ ಉದ್ದೇಶಿಸಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣ ಮುಂದುವರೆಯುವ ಸಾಧ್ಯತೆ ಇದೆ.