

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ‘ಕೆಜಿಎಫ್; ಚಾಪ್ಟರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಆ ಸಿನಿಮಾದ ಶೂಟಿಂಗ್ ಸಹ ಕೊನೇ ಹಂತದಲ್ಲಿದೆ. ಹೀಗಿರುವಾಗಲೇ ಯಶ್ ಮುಂದಿನ ಸಿನಿಮಾ ಬಗೆಗಿನ ಬ್ರೇಕಿಂಗ್ ಸುದ್ದಿಯೊಂದು ಪಕ್ಕದ ಟಾಲಿವುಡ್ನಿಂದ ತೂರಿ ಬಂದಿದೆ. ಅದೇನಪ್ಪಾ ಅಂದರೆ, ಕನ್ನಡ ಸೇರಿ ಬಹುಭಾಷೆಯಲ್ಲಿ ಯಶ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದು, ಅದರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಯಶ್ಗೆ ಜೋಡಿಯಾಗಲಿದ್ದಾರಂತೆ!
ಹಾಗಾದರೆ ಸಿನಿಮಾ ಯಾವುದು? ನಿರ್ದೇಶಕ, ನಿರ್ಮಾಪಕರ್ಯಾರು? ಸದ್ಯಕ್ಕೆ ಈ ಸುದ್ದಿಗಳಿಗೆ ಉತ್ತರ ಇಲ್ಲದಿದ್ದರೂ, ಟಾಲಿವುಡ್ ಮೂಲಗಳ ಪ್ರಕಾರ ಇದೊಂದು ಬಿಗ್ ಸಿನಿಮಾ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಕೆಜಿಎಫ್; ಚಾಪ್ಟರ್ 1ರಲ್ಲಿ ಹೆಜ್ಜೆ ಹಾಕಿದ್ದ ತಮನ್ನಾ, ಈ ಸಲ ಪೂರ್ಣ ಪ್ರಮಾಣದ ನಾಯಕಿಯಾಗಿ ಯಶ್ಗೆ ಸಾಥ್ ನೀಡಲಿದ್ದಾರಂತೆ. ಈಗಾಗಲೇ ತಮನ್ನಾ ಜತೆಗೆ ನಿರ್ಮಾಣ ಸಂಸ್ಥೆ ಒಂದು ಹಂತದ ಮಾತುಕತೆ ನಡೆಸಿದ್ದು, ತಮನ್ನಾ ಹಸಿರು ನಿಶಾನೆ ತೋರುವುದೊಂದೆ ಬಾಕಿ ಇದೆ.
ಸದ್ಯಕ್ಕೆ ಈ ಸುದ್ದಿ ಹರಿದಾಡುತ್ತಿದೆಯಾದರೂ, ಎಲ್ಲಿಯೂ ಈ ಬಗ್ಗೆ ಸಂಬಂಧಿಸಿದ ಚಿತ್ರತಂಡವಾಗಲಿ, ಯಶ್ ಆಗಲಿ ಮುಂದೆ ಬಂದು ಹೇಳಿಕೊಂಡಿಲ್ಲ. ಹಾಗಾಗಿ ಚಿತ್ರತಂಡದಿಂದ ಅಧಿಕೃತವಾದ ಮೇಲಷ್ಟೇ ಈ ಸುದ್ದಿ ನಿಜ ಎಂದು ಒಪ್ಪಿಕೊಳ್ಳಬಹುದು. ಇತ್ತ ಸಿನಿಮಾ ವಿಚಾರಕ್ಕೆ ಬರುವುದಾದರೆ, ತಮನ್ನಾ ದಕ್ಷಿಣ ಭಾರತದ ಹಲವು ಸಿನಿಮಾಗಳ ಜತೆಗೆ ಹಿಂದಿ ಪ್ರಾಜೆಕ್ಟ್ಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಯಶ್, ಮಡದಿ ಮಕ್ಕಳೊಂದಿಗೆ ಲಾಕ್ಡೌನ್ ದಿನಗಳನ್ನು ಕಳೆಯುತ್ತಿದ್ದಾರೆ. (ಏಜೆನ್ಸೀಸ್)