ಕೆಜಿಎಫ್​ನಲ್ಲಿ ಸಿಕ್ಕ ಶ್ರೀನಿಧಿ!

Srinidhi
Published on

|ಹರ್ಷವರ್ಧನ್ ಬ್ಯಾಡನೂರು

ಶ್ರೀನಿಧಿ ಶೆಟ್ಟಿ ಸದ್ಯ ‘ಕೆಜಿಎಫ್’ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ತಮಿಳಿನ ‘ಕೋಬ್ರಾ’ ಚಿತ್ರದ ರಿಲೀಸ್​ಗೂ ಎದುರು ನೋಡುತ್ತಿದ್ದಾರೆ. ಅದರ ಜತೆಗೆ ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ಹಾಗಾದರೆ, ಅವರ ಮುಂದಿನ ಚಿತ್ರ ಯಾವುದು? ‘ಕೆಜಿಎಫ್ 2’ ನಂತರ ಅವರ ಸಂಭಾವನೆ ಹೆಚ್ಚಿದೆಯಂತೆ, ಹೌದಾ? ಈ ಎಲ್ಲ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ, ‘ವಿಜಯವಾಣಿ’ ಈ ವಿಶೇಷ ಸಂದರ್ಶನದಲ್ಲಿ...

  •  ‘ಕೆಜಿಎಫ್-2’ ಯಶಸ್ಸು ಹೇಗನಿಸುತ್ತಿದೆ?

ತುಂಬ ಖುಷಿ ನೀಡಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ದೊರೆತಿದೆ. ನನ್ನ ಸಿನಿಮಾ ಎಂಬ ಹೆಮ್ಮೆ ಕೂಡ ಇದೆ. ಜನ ಇಷ್ಟಪಟ್ಟಿದ್ದಾರೆ, ದಾಖಲೆ ಗಳಿಕೆ ಮಾಡಿದೆ. ಮೊದಲಿಗೆ, ಚಿತ್ರ ಯಾವಾಗ ಬಿಡುಗಡೆ ಆಗುತ್ತೋ ಅಂತ ಕಾಯುತ್ತಿದ್ದೆ. ಈಗ 50ನೇ ದಿನಕ್ಕೆ ಕಾಲಿಟ್ಟಿದ್ದು ಸಂತಸ ಇಮ್ಮಡಿಗೊಳಿಸಿದೆ.

  •   ತಮಿಳಿನ ‘ಕೋಬ್ರಾ’ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

‘ಕೋಬ್ರಾ’ ಚಿತ್ರದಲ್ಲಿ ನಾನು ಭಾವನಾ ಎಂದ ಪಾತ್ರದಲ್ಲಿ ನಟಿಸಿದ್ದೇನೆ. ‘ಕೆಜಿಎಫ್’ನ ರೀನಾಗಿಂತ ವಿಭಿನ್ನ ಪಾತ್ರ. ಏಕೆಂದರೆ ರೀನಾ ಪಾತ್ರ ನಗುತ್ತಲೇ ಇರಲಿಲ್ಲ, ಯಾವಾಗಲೂ ಗಂಭೀರವಾಗಿರುತ್ತಿದ್ದಳು. ಆದರೆ, ಭಾವನಾ ಹಾಗಲ್ಲ, ುಂಬ ಜೋವಿಯಲ್. ಯಾವಾಗಲೂ ನಗುತ್ತಿರುತ್ತಾಳೆ. ಎರಡು ಚಿತ್ರಗಳಲ್ಲೂ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ ಖುಷಿಯಿದೆ.

  •   ಅಭಿಮಾನಿಗಳು ಈಗ ನಿಮ್ಮನ್ನು ‘ನ್ಯಾಷನಲ್ ಕ್ರಷ್’ ಎನ್ನುತ್ತಿದ್ದಾರಲ್ಲಾ...

ನಾನು ನ್ಯಾಷನಲ್ ಕ್ರಷ್ ಅಂತೆಲ್ಲಾ ನಂಬಲ್ಲ. ಆದರೆ, ಜನ ಪ್ರೀತಿಯಿಂದ ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಗಂತ ಕರೆಯುತ್ತಾರೆ. ಹಾಗೆ ಕರೆಯುವಂತೆ ನಾನೇನೂ ಸಾಧನೆ ಮಾಡಿಲ್ಲ. ಹೌದು, ‘ಕೆಜಿಎಫ್’ ಹಿಟ್ ಆಗಿದೆ. ಜನರಿಂದ ಪ್ರಶಂಸೆ ಸಿಗುತ್ತಿದೆ. ಐದು ಭಾಷೆಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಿನಿಮಾನ ನೋಡಿ ಜನ ಎಂಜಾಯ್ ಮಾಡುತ್ತಿದ್ದಾರೆ. ನನ್ನ ಪಾತ್ರದಿಂದ ನನ್ನನ್ನೂ ಗುರುತಿಸುತ್ತಿದ್ದಾರೆ. ‘ಕೆಜಿಎಫ್’ಹುಡುಗಿ ಅಂತ ಕರೆಯುತ್ತಾರೆ.

  •   ನಾಯಕಿಯರಿಗೆ ಶೆಲ್ಪ ಲೈಫ್ ಕಡಿಮೆ, ನಿಮಗೆ ಆ ಆತಂಕ ಕಾಡಲಿಲ್ಲವಾ?

ಹೌದು, ನನಗೂ ಆ ಆತಂಕವಿತ್ತು. ಯಾವಾಗ ಕರೋನಾದಿಂದಾಗಿ ಎರಡು ವರ್ಷ ತಡವಾಯಿತೋ, ಎಲ್ಲರೂ ಸಿನಿಮಾ ಮೇಲೆ ಸಿನಿಮಾ ಮಾಡುತ್ತಿದ್ದಾರೆ ಎಂದು ಅಕ್ಕಪಕ್ಕದವರು ಒತ್ತಡ ಹಾಕುತ್ತಿದ್ದರು. ‘ಕೆಜಿಎಫ್-1’ ಬಳಿಕ ನಾನು ‘ಕೋಬ್ರಾ’ ಸೈನ್ ಮಾಡಿದ್ದು. ಆದರೆ, ‘ಕೆಜಿಎಫ್ 1’ಗೆ ಸಿಕ್ಕ ಯಶಸ್ಸಿನಿಂದ ಅದರ ಮುಂದುವರೆದ ಭಾಗ ಶುರುವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ 5, 10 ಚಿತ್ರಗಳಿಂದ ಸಿಗುವ ಯಶಸ್ಸು ನನಗೆ ಈ ‘ಕೆಜಿಎಫ್’ ಒಂದರಿಂದ ಸಿಕ್ಕಿದೆ. ಕ್ವಾಂಟಿಟಿಗಿಂತ ಕ್ವಾಲಿಟಿ ಮುಖ್ಯ ಅಲ್ವಾ?

  •   ‘ಕೋಬ್ರಾ’ ಯಾವಾಗ ರಿಲೀಸ್? ಮುಂದೇನು?

ಇದೇ ಆಗಸ್ಟ್ 11ರಂದು ರಿಲೀಸ್ ಆಗಲಿದೆ. ಈಗಾಗಲೇ ಬೇರೆ ಭಾಷೆಗಳಲ್ಲೂ ಕಥೆಗಳನ್ನು ಕೇಳಿದ್ದೇನೆ. ಆದರೆ, ಡೇಟ್ಸ್ ಹೊಂದಿಕೆ ಆಗುತ್ತಿಲ್ಲ. ತಡವಾಗುತ್ತಿದೆ ಅಂತ ಗೊತ್ತಿದೆ. ಆದರೆ, ಮಾಡಿದರೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬುದು ನನ್ನ ಉದ್ದೇಶ.

  •   ಯಶ್ ಮತ್ತು ನಿರ್ದೇಶಕ ಪ್ರಶಾಂತ್ ಅವರಿಂದ ನೀವು ಕಲಿತಿದ್ದೇನು?

ನಟ ಯಶ್ ಅವರದು ಒಂದು ರೀತಿಯ ಕ್ಲಾಸಿಕ್ ಜರ್ನಿ. ಅದು ಎಲ್ಲರಿಗೂ ಗೊತ್ತಿದೆ. ಏನಾದರೂ ಸಾಧಿಸಬೇಕು ಅಂದರೆ ಛಲ ಬಿಡದೇ ಸಾಧಿಸುತ್ತಾರೆ. ಇನ್ನು ಪ್ರಶಾಂತ್ ಸರ್ ನನಗೆ ಸ್ಪೆಷಲ್. ಯಾಕಂದರೆ ಅವರೇ ನನ್ನ ಗುರುಗಳು, ಗೆಳೆಯ, ತಂದೆಯ ಸ್ಥಾನದಲ್ಲಿ ನಿಂತಿರುವ ವ್ಯಕ್ತಿ, ಮೆಂಟರ್... ಅವರಲ್ಲಿನ ಸ್ಪಷ್ಟತೆ ನನಗೆ ಇಷ್ಟ. ಅಂದುಕೊಂಡಿದ್ದನ್ನು ಮಾಡುತ್ತಾರೆ.

  • ರಶ್ಮಿಕಾ, ಆಲಿಯಾ ಅವರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದೀರಂತೆ, ನಿಜಾನಾ?

(ನಗುತ್ತಾ) ಪೂಜಾ ಹೆಗ್ಡೆ, ಆಲಿಯಾ ಭಟ್ ಅವರಷ್ಟೆಲ್ಲಾ ನಾನು ರೀಚ್ ಆಗಿಲ್ಲ. ಅವರೆಲ್ಲಾ 20 ಚಿತ್ರಗಳನ್ನು ಮಾಡಿದ್ದಾರೆ. ನಾನಿನ್ನೂ ಮೂರು ಸಿನಿಮಾ ಮುಗಿಸಿ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ ಅಷ್ಟೇ. ಡೇಟ್ಸ್ ಬಗ್ಗೆ ಮಾತುಕತೆ ನಡೆಯುತ್ತಿದೆಯೇ ಹೊರತು, ಇನ್ನೂ ಸಂಭಾವನೆ ಮಟ್ಟಕ್ಕೆ ಯಾವುದೇ ಚಿತ್ರದ ಮಾತುಕತೆ ಆಗಿಲ್ಲ. ನಾನು ದುಡ್ಡಿಗಾಗಿ ಸಿನಿಮಾ ಮಾಡಿದ್ದರೆ ಈ ಐದು ವರ್ಷಗಳಲ್ಲಿ ಐದೋ, ಹತ್ತೋ ಸಿನಿಮಾ ಮಾಡಿಬಿಡುತ್ತಿದ್ದೆ. ಆದರೆ, ನಾನು ಹಣಕ್ಕಿಂತ ಹೆಚ್ಚಾಗಿ ಒಳ್ಳೆಯ ಕಥೆ, ಒಳ್ಳೆಯ ತಂಡ, ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಹಾಗೇನಾದರೂ ನನಗೆ ಕಥೆ, ಪಾತ್ರ ಒಪ್ಪಿಗೆ ಆಗಿ ಚಿತ್ರತಂಡದವರು ಸಂಭಾವನೆ ಕಡಿಮೆ ಕೊಡುತ್ತೀವಿ ಅಂದರೂ ಸಿನಿಮಾ ಮಾಡುವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net