

ಬೆಂಗಳೂರು: ಕನ್ನಡ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಬಳಿಕ ಬೇರೆ ಭಾಷೆಯಲ್ಲಿ ಗುರುತಿಸಿಕೊಂಡ ಕಲಾವಿದರ ಪಟ್ಟಿಯೇ ಇದೆ. ಆ ಸಾಲಿಗೆ ಹೊಸ ಸೇರ್ಪಡೆ ‘ಕೆಜಿಎಫ್’ ಸರಣಿಯಲ್ಲಿ ಆ್ಯಂಡ್ರೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವಿನಾಶ್. ‘ಕೆಜಿಎಫ್’ ಯಶಸ್ಸಿನ ಬಳಿಕ ಅವಿನಾಶ್ ಹಿಂದಿರುಗಿ ನೋಡಿಲ್ಲ. ‘ಗುರುದೇವ ಹೊಯ್ಸಳ’ ಚಿತ್ರದಲ್ಲಿ ಡಾಲಿ ಧನಂಜಯ ವಿರುದ್ಧ ತೊಡೆ ತಟ್ಟಿದ್ದ ಈ ವಿಲನ್, ಇದೀಗ ಪರಭಾಷೆಗಳಲ್ಲೂ ಖಡಕ್ ಖಳನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ತೆಲುಗಿನ ‘ವೀರಸಿಂಹ ರೆಡ್ಡಿ’, ‘ವಾಲ್ಟೇರ್ ವೀರಯ್ಯ’ ತಮಿಳಿನ ‘ವೆಟ್ಟೆ ಯಾನ್’, ‘ಕಂಗುವಾ’, ಮಲಯಾಳಂನ ‘ಒರು ಪೆರು ಕಲಿಯುಟ್ಟಂ’ ಹಾಗೂ ಹಿಂದಿಯ ‘ಬೇಬಿ ಜಾನ್’ ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಮಿಂಚಿದ್ದಾರೆ. ಕಟ್ಟುಮಸ್ತಾದ ಮೈಕಟ್ಟು ಹೊಂದಿರುವ ಅವಿನಾಶ್ ಹೀಗೆ ಪ್ಯಾನ್ ಇಂಡಿಯಾ ಸವಾರಿ ಹೊರಟಿದ್ದಾರೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಾಯಕನಾಗಿರುವ ‘ಏಸ್’, ಅಜಿತ್ ಕುಮಾರ್ ನಟಿಸುತ್ತಿರುವ ‘ಗುಡ್ ಬ್ಯಾಡ್ ಅಗ್ಲಿ’, ತೆಲುಗಿನಲ್ಲಿ ವಿಜಯ್ ದೇವರಕೊಂಡ ನಾಯಕನಾಗಿರುವ ‘ಕಿಂಗ್ಡಮ್’, ‘ಬುಲೆಟ್’, ‘ನಾಗಬಂಧಂ’ ಸೇರಿ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಿದ್ಧತೆ ನಡೆಸಿವೆ. ‘ನಟಿಸಬೇಕು ಎಂಬ ಆಸೆ ಇದ್ದರೂ, ಯಾವತ್ತೂ ಸ್ಟೇಜ್ ಹತ್ತಿರಲಿಲ್ಲ. ‘ಕೆಜಿಎಫ್’ ಚಿತ್ರದ ಛಾಯಾಗ್ರಾಹಕ, ಗೆಳೆಯ ಭುವನ್ ಒಮ್ಮೆ ನನ್ನನ್ನು ಪ್ರಶಾಂತ್ ನೀಲ್‌ಗೆ ಪರಿಚಯಿಸಿದರು. ಪ್ರಶಾಂತ್ ನಾನು ವಿಲನ್‌ಗೆ ಒಪ್ಪುತ್ತೇನೆ ಎಂದು ‘ಕೆಜಿಎಫ್’ನಲ್ಲಿ ಪಾತ್ರ ನೀಡಿದರು. ಜತೆಗೆ ಒಂದು ವರ್ಷ ಆ್ಯಕ್ಟಿಂಗ್ ತರಬೇತಿ ಕೂಡ ನೀಡಿದರು. ಹೀಗಾಗಿ, ಇಂದು ಎಲ್ಲ ಭಾಷೆಗಳಲ್ಲಿ ಸಿನಿಮಾ ಮಾಡಲು ಸಾಧ್ಯವಾಯಿತು’ ಎಂದು ಮಾಹಿತಿ ಹಂಚಿಕೊಳ್ಳುವ ಅವಿನಾಶ್, ಭಿನ್ನ-ವಿಭಿನ್ನ ಪಾತ್ರ ಮಾಡುವ ಅಭಿಲಾಷೆವ್ಯಕ್ತಪಡಿಸುತ್ತಾರೆ.